ದೇಶ

ದೆಹಲಿ ಪಾಲಿಕೆ ಉಪಚುನಾವಣೆ: ಆಪ್ ಗೆ ಹೆಚ್ಚು ಸ್ಥಾನ, ಕಾಂಗ್ರೆಸ್ ಗೆ ಸಮಾಧಾನ, ಬಿಜೆಪಿಗೆ ಅವಮಾನ!

Srinivas Rao BV

ನವದೆಹಲಿ: ಮೇ.15 ರಂದು ದೆಹಲಿ ನಗರಪಾಲಿಕೆಯ 13 ವಾರ್ಡ್ ಗಳಿಗೆ ನಡೆದಿದ್ದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿಯ ಭದ್ರಕೋಟೆಗೆ ಆಮ್ ಆದ್ಮಿ ಪಕ್ಷ ಲಗ್ಗೆ ಇಟ್ಟಿದೆ.

ದೆಹಲಿ ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತಪಕ್ಷವಾಗಿದ್ದು ಉಪಚುನಾವಣೆ ನಡೆದ 13 ವಾರ್ಡ್ ಗಳ ಪೈಕಿ ಆಮ್ ಆದ್ಮಿ ಪಕ್ಷ 5 ವಾರ್ಡ್ ಗಳನ್ನು ಗೆದ್ದಿದೆ. ವಿರೋಧಪಕ್ಷವಾಗಿರುವ ಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಪಡೆದು ಅಚ್ಚರಿ ಮೂಡಿಸಿದ್ದರೆ, ಬಿಜೆಪಿ ಕೇವಲ 3 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಇನ್ನು ಉಳಿದ ಒಂದು ವಾರ್ಡ್ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.ಆಮ್ ಆದ್ಮಿ ಪಕ್ಷ ಅತಿ ಹೆಚ್ಚು ಸ್ಥಾನ ಪಡೆದಿದೆಯಾದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ 13 ವಾರ್ಡ್ ಗಳ ಪೈಕಿ ಆಪ್ 12 ವಾರ್ಡ್ ಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.

ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆ ಅಚ್ಚರಿಯಲ್ಲ ಎಂದು ವಿಶ್ಲೇಷಿಸಲಾಗಿದೆ.ಉಪಚುನಾವಣೆ ಫಲಿತಾಂಶದ ನಂತರ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿತ್ತು ಎಂದಿದ್ದಾರೆ. ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಿಜೆಪಿ- ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ದೆಹಲಿ ನಗರಪಾಲಿಕೆಯ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಿದೆ. ಆಮ್ ಆದ್ಮಿ ಪಕ್ಷದ ಮೇಲೆ ನಂಬಿಕೆ ಇಟ್ಟಿರುವ ಮತದಾರರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇನ್ನು ಒಂದು ವಾರ್ಡ್ ನಲ್ಲಿ ಗೆದ್ದಿರುವ ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್ ಸೇರುವುದಾಗಿ ತಿಳಿಸಿದ್ದಾರೆ.

SCROLL FOR NEXT