ಶ್ರೀನಗರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಭದ್ರತಾ ಪಡೆಗಳನ್ನು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ದಾಳಿಯಿಂದಾಗಿ ಸಿಆರ್ ಪಿಎಫ್ ಯೋಧ ಸೇರಿದಂತೆ ಇಬ್ಬರು ಸಾವನ್ನಪ್ಪಿರುವ ಘಟನೆ ಶ್ರೀನಗರದಲ್ಲಿ ನಡೆದಿದೆ.
ಶ್ರೀನಗರದ ಝುಡಿಬಾಲ್ ಪೊಲೀಸ್ ಠಾಣೆಯ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಉಗ್ರರು ಇಬ್ಬರು ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಇಂದು ಸೋಮವಾರವಾದ್ದರಿಂದ ಠಾಣೆಯಲ್ಲಿ ಹೆಚ್ಚು ಜನ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದರು. ಇದೇ ಸಮಯವನ್ನು ಕಾಯುತ್ತಿದ್ದ ಉಗ್ರರು ಇಂದು ಬೆಳಗ್ಗೆ ಏಕಾಏಕಿ ಸತತ ಗುಂಡಿನ ಮಳೆಗರೆಯುವ ಮೂಲಕ ಓರ್ವ ಎಎಸ್ಐ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ಬಲಿ ಪಡೆದಿದ್ದಾರೆ. ಮತ್ತೋರ್ವ ಕಾನಸ್ಟೆಬಲ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸೇನಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಕೆಲವೇ ನಿಮಿಷಗಳಲ್ಲಿ 2 ದಾಳಿ
ಮೂಲಗಳ ಪ್ರಕಾರ ಝುಡಿಬಾಲ್ ಪೊಲೀಸ್ ಠಾಣೆಯ ಮೇಲೆ ಉಗ್ರರು ನಡೆಸಿದ ದಾಳಿ ಬೆನ್ನಲ್ಲೇ ಟಂಕಿಪೋರದಲ್ಲಿರುವ ಸಿಆರ್ ಪಿಎಫ್ ತುಕಡಿ ಮೇಲೂ ಉಗ್ರರು ದಾಳಿ ನಡೆಸಿದ್ದಾರೆ. ಮೊದಲ ದಾಳಿ ನಡೆದ ಬಳಿಕದ ಕೇವಲ 2 ನಿಮಿಷದ ಅಂತರದಲ್ಲಿ ಮತ್ತೆ ಟಂಕಿಪೋರಾ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿನ ಝುಡಿಬಾಲ್ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕರು ಪಾರ್ಟಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಪೊಲೀಸರನ್ನು ಬಲಿ ಪಡೆದಿದ್ದಾರೆ. ಎಎಸ್ಐ ನಜೀರ್ ಅಹಮ್ಮದ್ ಮತ್ತು ಕಾನಸ್ಟೆಬಲ್ ಬಷೀರ್ ಅಹಮ್ಮದ್ ಉಗ್ರರ ಗುಂಡಿಗೆ ಬಲಿಯಾಗಿರುವ ಪೊಲೀಸರು. ಇನ್ನೋರ್ವ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಈ ಘಟನೆ ನಡೆದು ಕೆಲವೇ ನಿಮಿಷಗಳ ಅಂತರದಲ್ಲಿ ಇಲ್ಲಿನ ಟಂಕಿಪೊರ ಎನ್ನುವಲ್ಲಿ ಸಿಆರ್ಪಿಎಫ್ ತುಕಡಿಯ ಮೇಲೆ ದಾಳಿ ನಡೆಸಿದ್ದು ಈರ್ವ ಸಿಬ್ಬಂದಿ ಬಲಿಯಾಗಿದ್ದಾರೆ.