ದೇಶ

ಕುಡಿದ ಮತ್ತಿನಲ್ಲಿ ಸಿಂಹಗಳ ಪಾರ್ಕ್ ಗೆ ಜಿಗಿದ ಭೂಪ, ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಪ್ರಾಣ ರಕ್ಷಣೆ

Srinivasamurthy VN

ಹೈದರಾಬಾದ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಅಪಾಯಕಾರಿ ಸಿಂಹಗಳಿರುವ ಪಾರ್ಕ್ ಗೆ ಜಿಗಿದಿದ್ದು, ಕೂಡಲೇ ಸಮಯ ಪ್ರಜ್ಞೆ ಮೆರೆದ ಮೃಗಾಲಯದ ಸಿಬ್ಬಂದಿ ಆತನನ್ನು ರಕ್ಷಿಸಿದ್ದಾರೆ.

ಹೈದರಾಬಾದ್ ನ ನೆಹರೂ ಮೃಗಾಲಯದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ರಾಜಸ್ತಾನ ಮೂಲದ ಸುಮಾರು 35 ವರ್ಷ ವಯಸ್ಸಿನ ಮುಖೇಶ್ ಎಂಬಾತನೇ ಸಿಂಹಗಳ ಪಾರ್ಕ್ ಜಿಗಿದ  ವ್ಯಕ್ತಿಯಾಗಿದ್ದಾನೆ. ಎಚ್ಚರಿಕೆ ಫಲಕವಿದ್ದರೂ ಅದನ್ನು ನಿರ್ಲಕ್ಷಿಸಿದ ಠಾಕೂರ್ ಪಾರ್ಕ್ ನ ಗೋಡೆ ಹತ್ತಿ ಒಳಗೆ ಜಿಗಿದಿದ್ದಾನೆ. ಅದೃಷ್ಟವಶಾತ್ ಅಲ್ಲಿಯೇ ಕೆಲಸ ಮಾಡುತ್ತಿದ್ದ ಮೃಗಾಲಯದ ಸಿಬ್ಬಂದಿ  ಆರ್ ಪಾಪಯ್ಯ ಎಂಬುವವರು ಇದನ್ನು ಕಂಡ ತನ್ನ ಇತರೆ ಸಹೋದ್ಯೋಗಿಗಳನ್ನು ಎಚ್ಚರಿಸಿದ್ದಾರೆ.

ಕುಡುಕ ಮುಖೇಶ್ ಪಾರ್ಕ್ ನೊಳಗೆ ಜಿಗಿಯುತ್ತಿದ್ದಂತೆಯೇ ಎಚ್ಚೆತ್ತ ಸಿಂಹಗಳು ಆತನ ಮೇಲೆ ದಾಳಿ ಮಾಡಲು ಮುಂದಾದವಾದರೂ, ಒಂದು ಕ್ಷಣವೂ ತಡ ಮಾಡದ ಸಿಬ್ಬಂದಿ ಆರ್ ಪಾಪಯ್ಯ  ಕಲ್ಲುಗಳನ್ನು ಎಸೆಯುವ ಮೂಲಕ ಸಿಂಹಗಳನ್ನು ಬೆದರಿಸಿ ದೂರ ಓಡುವಂತೆ ಮಾಡಿದ್ದಾರೆ. ಬಳಿಕ ನೀರಿನ ಹೊಂಡದಲ್ಲಿ ಬಿದ್ದಿದ್ದ ಕುಡುಕ ಮುಖೇಶ್ ನನ್ನು ಕೋಲಿನ ಸಹಾಯದ ಮೂಲಕ  ಮೇಲೆತ್ತಿ ಆತನ ಪ್ರಾಣ ಉಳಿಸಿದ್ದಾರೆ.

ಕೂಡಲೇ ಆತನನ್ನು ವಶಕ್ಕೆ ಪಡೆದ ಮೃಗಾಲಯದ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಿದ್ದು, ವೈದ್ಯಕೀಯ ಪರೀಕ್ಷೆಯಿಂದ ಆತ ಕುಡಿದಿರುವುದು ಸಾಬೀತಾಗಿದೆ. ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಇಂತಹುದೇ ಒಂದು ಘಟನೆ ಚಿಲಿಯಲ್ಲಿ ನಡೆದಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಸ್ಯಾಂಟಿಯಾಗೋ ಮೃಗಾಲಯಕ್ಕೆ ಆಗಮಿಸಿದ್ದ ವ್ಯಕ್ತಿಯೋರ್ವ ಅಚಾನಕ್ಕಾಗಿ  ಬೆತ್ತಲಾಗಿ ಸಿಂಹಗಳ ಬೋನಿಗೆ ಬಿದ್ದಿದ್ದ. ಕೂಡಲೇ ಆತನ ಸಿಂಹಗಳು ದಾಳಿ ಮಾಡಿದವು. ಆಗ ಆತನ ರಕ್ಷಣೆಗೆ ಯತ್ನಿಸಿದ ಸಿಬ್ಬಂದಿ ಗುಂಡು ಹಾರಿಸಿ 2 ಸಿಂಹಗಳನ್ನು ಕೊಂದು ಹಾಕಿದ್ದರು. ಈ  ಘಟನೆ ಮಾಸುವ ಮುನ್ನವೇ ಅಂತಹುದೇ ಮತ್ತೊಂದು ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಈ ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

SCROLL FOR NEXT