ನವದೆಹಲಿ: ಭೂಗತ ಪಾತಕಿಯಾಗಿರುವ ದಾವೂದ್ ಇಬ್ರಾಹಿಂನನ್ನು ಶೀಘ್ರದಲ್ಲಿ ಹುಡುಕಿ ಭಾರತಕ್ಕೆ ಕರೆತರಲಾಗುತ್ತದೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ದಾವೂದ್ ಇಬ್ರಾಹಿಂ ಒಬ್ಬ ಅಂತರಾಷ್ಟ್ರೀಯ ಭಯೋತ್ಪಾದಕನಾಗಿದ್ದು, ಈತನನ್ನು ಶೀಘ್ರದಲ್ಲಿ ಹುಡುಕಿ, ಭಾರತಕ್ಕೆ ಕರೆತರಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಯಾವ ಸಮಯದಲ್ಲಿ ಆತನನ್ನು ಬಂಧಿಸಲಾಗುತ್ತದೆ ಎಂಬುದನ್ನು ತಿಳಿಸಿಲ್ಲ.
ದಾವೂದ್ ಕುರಿತ ಸಾಕಷ್ಟು ದಾಖಲೆಗಳನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ದಾವೂದ್ ಪಾಕಿಸ್ತಾನದಲ್ಲಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದ ನಂತರ ಆತನನ್ನು ವಶಕ್ಕೆ ನೀಡುವಂತೆ ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಬಳಿ ನಿರಂತರವಾಗಿ ಮಾತುಕತೆ ನಡೆಸುತ್ತಲೇ ಇದೆ ಎಂದು ಹೇಳಿದ್ದಾರೆ.
ಅಲ್ಲದೆ, ಇದೇ ವೇಳೆ ಭಾರತೀಯ ಜಿಹಾದಿಗಳು ಭಾರತದಲ್ಲಿರುವ ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದು, ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂಬ ಸುದ್ದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಭಯೋತ್ಪಾದಕ ಸಂಘಟನೆಗಳಿಂದ ಭಾರತಕ್ಕೆ ಯಾವುದೇ ಬೆದರಿಕೆಗಳಿಲ್ಲ. ಇಸಿಸ್ ನಿಂದಲೂ ಯಾವುದೇ ಬೆದರಿಕೆ ಇಲ್ಲ. ದೇಶದಲ್ಲಿರುವ ಮುಸ್ಲಿಮರು ಇಸಿಸ್ ವಿರುದ್ಧವಿದ್ದು, ಮುಸ್ಲಿಂ ಸಮುದಾಯದವರು ಇಸಿಸ್ ಗೆ ಯಾವುದೇ ಕಾರಣಕ್ಕೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದ್ದಾರೆ.