ನವದೆಹಲಿ: ಕೇಂದ್ರ ಸರ್ಕಾರದ ಎರಡು ವರ್ಷದ ಸಾಧನಾ ಕಾರ್ಯಕ್ರಮವನ್ನು ಕಪ್ಪು ಹಣ ಹೊಂದಿರುವುದಾಗಿ ಆರೋಪ ಹೊತ್ತಿರುವ ಅಮಿತಾಬ್ ಬಚ್ಚನ್ ನಿರೂಪಣೆ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದ ಕಾಂಗ್ರೆಸ್ ನ ಬೂಟಾಟಿಕೆ ಮಾತು ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವರಿಷ್ಠರೇ ವಂಚನೆ ಮತ್ತು ಪಿತೂರಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಅಂತಹವರು ಈ ರೀತಿ ಹೇಳಿಕೆ ನೀಡುವುದೆಲ್ಲ ಕೇವಲ ಬೂಟಾಟಿಕೆಯ ಮಾತು ಎಂದು ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಜಾಮೀನಿನ ಮೇಲೆ ಹೊರ ಇದ್ದಾರೆ. ಅವರ ಮೇಲೆ ಪಿತೂರಿ, ವಂಚನೆ ಸೇರಿದಂತೆ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಸಂಬಂಧ ಕೋರ್ಟ್ ಹಾಜರಾಗಿ ಜಾಮೀನು ಪಡೆದಿದ್ದಾರೆ. ಇಂತಹ ನಾಯಕರು ಅಮಿತಾಬ್ ಬಚ್ಚನ್ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಟೀಕಿಸಿದ್ದಾರೆ.
ಅನೇಕರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಹಾಗೆಂದು ಅವರು ತಪ್ಪಿತಸ್ಥರೆಂದೆಲ್ಲ. ಅಲ್ಲದೇ ಅವರೆಲ್ಲರೂ ಮೇಲ್ನೋಟಕ್ಕೂ ಅಪರಾಧಿಗಳಲ್ಲ. ಹೀಗಿರಬೇಕಾದರೆ ಕಾಂಗ್ರೆಸ್ ನಾಯಕರು ಹೇಗೆ ಇತರರ ಬಗ್ಗೆ ಮಾತನಾಡುತ್ತಾರೆ, ಅವರ ವರಿಷ್ಠರೇ ಜಾಮೀನಿನ ಮೇಲೆ ಹೊರ ಇರಬೇಕಾದರೆ? ಎಂದು ಸ್ವಾಮಿ ಪ್ರಶ್ನಿಸಿದ್ದಾರೆ.
ನಿನ್ನೆ ಎನ್ ಡಿಎ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶ ಕಾರ್ಯಕ್ರಮವನ್ನು ಬಿಗ್ ಬಿ ನಿರೂಪಣೆ ಮಾಡುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು.
ಇನ್ನು ಈ ವಿವಾದಗಳಿಗೆ ಪ್ರತಿಕ್ರಯಿಸಿರುವ ಅಭಿಷೇಕ್ ಬಚ್ಚನ್, ನಮ್ಮ ತಂದೆ ಇಡೀ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿಲ್ಲ. ಕೇವಲ ಹೆಣ್ಣು ಮಗುವಿನ ಶಿಕ್ಷಣ ಕುರಿತ ಕಾರ್ಯಕ್ರಮವನ್ನು ಮಾತ್ರ ನಡೆಸಿಕೊಡುತ್ತಿದ್ದಾರೆ. ಯಾವುದೇ ರಾಜಕೀಯದ ಕಾರ್ಯಕ್ರಮವನ್ನು ನಡೆಸಿಕೊಡುತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.