ದೇಶ

2 ವರ್ಷಗಳ ಸಾಧನೆಗೆ ಪ್ರಚಾರಕ್ಕಾಗಿ 1000 ಕೋಟಿ ವ್ಯಯ: ಕೇಂದ್ರದ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

Srinivas Rao BV

ನವದೆಹಲಿ: ತಮ್ಮ ಸರ್ಕಾರ ಜಾಹಿರಾತುಗಳಿಗಾಗಿ ಅತಿ ಹೆಚ್ಚು ಹಣ ಖರ್ಚು ಮಾಡುತ್ತಿರುವುದಕ್ಕೆ ಟೀಕೆಗಳು ವ್ಯಕ್ತವಾಗುತ್ತಿದೆ. ಆದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನರೇಂದ್ರ ಮೋದಿ ಸರ್ಕಾರ ಎರಡು ವರ್ಷಗಳ ಸಾಧನೆಯನ್ನು ಜನರಿಗೆ ತಿಳಿಸಲು 1000 ಕೋಟಿ ಖರ್ಚು ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  
ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷಗಳು ತುಂಬಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಗಳನ್ನು ಜಾಹಿರಾತು ಮೂಲಕ ಜನರಿಗೆ ತಿಳಿಸುವುದಕ್ಕಾಗಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ 1000 ಕೋಟಿಗಳನ್ನು ಖರ್ಚು ಮಾಡುತ್ತಿದೆ. ದೆಹಲಿ ಸರ್ಕಾರ ಒಂದು ವರ್ಷದ ಆಡಳಿತದ ಸಾಧನೆಗಳನ್ನು ಜನರಿಗೆ ತಿಳಿಸಲು 150 ಕೋಟಿಗಿಂತ ಕಡಿಮೆ ಖರ್ಚು ಮಾಡಿದೆ. ಆದರೆ ಕೇಂದ್ರ ಸರ್ಕಾರ ಎರಡು ವರ್ಷದ ಸಾಧನೆಗಳನ್ನು ಜನರಿಗೆ ತಿಳಿಸಲು 1000 ಕೋಟಿಗಿಂತ ಹೆಚ್ಚು ಹಣ ಖರ್ಚು ಮಾಡುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.    
ಮೋದಿ ಸರ್ಕಾರದ ವೆಚ್ಚಕ್ಕೆ ಟ್ವಿಟರ್ ನಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕೇಜ್ರಿವಾಲ್, ಕೇಂದ್ರ ಸರ್ಕಾರ ಜಾಹಿರಾತುಗಳಿಗಾಗಿ ಎಷ್ಟು ಖರ್ಚು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೂ ಮುನ್ನ ಸರ್ಕಾರದ ಸಾಧನೆಗಳನ್ನು ಜಾಹಿರಾತು ಮೂಲಕ ತಿಳಿಸುವುದಕ್ಕಾಗಿ ದೆಹಲಿ ಸರ್ಕಾರ ಒಂದು ತಿಂಗಳಿಗೆ 14 .5 ಕೋಟಿ ಖರ್ಚು ಮಾಡುತ್ತಿರುವುದು ಆರ್ ಟಿಐ ಮೂಲಕ ತಿಳಿದುಬಂದಿತ್ತು. ಇದು ಕೇವಲ ದಿನಪತ್ರಿಕೆಗಳಿಗೆ ನೀಡಿರುವ ಜಾಹಿರಾತಿನ ಮೊತ್ತವಾಗಿದ್ದು ಟಿವಿ, ರೇಡಿಯೋ ಜಾಹಿರಾತುಗಳಿಗೆ ದೆಹಲಿ ಸರ್ಕಾರ ಖರ್ಚು ಮಾಡಿರುವ ಮೊತ್ತವನ್ನೂ ಸೇರಿಸಿದರೆ 14 .5 ಕೋಟಿಗಿಂಟ ಹೆಚ್ಚು ಖರ್ಚು ಮಾಡಿದೆ ಎಂದು ದೆಹಲಿ ಕಾಂಗ್ರೆಸ್ ನ ಮುಖಂಡ ಅಜಯ್ ಮಕೇನ್ ಆರೋಪಿಸಿದ್ದರು. 

SCROLL FOR NEXT