ತಿರುವನಂತಪುರ: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತ ದೇಶವನ್ನು ಹಾಳು ಮಾಡಲು ಸಾಕಷ್ಟು ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎನ್ ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ತಿರುವನಂತಪುರದಲ್ಲಿ ಕೆಪಿಸಿಸಿ ಏರ್ಪಡಿಸಿದ್ದ ಮೋದಿ ಸರ್ಕಾರದ 2 ನೇ ವರ್ಷಾಚರಣೆ ವಿರುದ್ಧ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದರು. ಸರ್ಕಾರದ ಕೆಟ್ಟ ನೀತಿನಿಯಮಗಳ ವಿರುದ್ದ ಜನತೆ ಸಿಡಿದೆದ್ದಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಜನತೆ ಮುಂದಿಡಲು ಕಾಂಗ್ರೆಸ್ ಒಗ್ಗಟ್ಟಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದ್ದಾರೆ.
ತಾವು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಪ್ರಧಾನಿ ನರೇಂದ್ರ ಮೋದಿಗೆ ಸ್ಪಷ್ಟವಾಗಿದೆ, ಹೀಗಾಗಿ ಯಾವಾಗಲೂ ತಮ್ಮ ಅಸಹಿಷ್ಟುತೆ ಪ್ರದರ್ಶಿಸುತ್ತಾರೆ , ಆದರೆ ಭಾರತ ದೇಶದ ಜನ ಮೋದಿ ಅವರ ಹಾಗೆ ಅಸಹಿಷ್ಣುಗಳಲ್ಲ ಎಂದು ಹೇಳಿದ್ದಾರೆ.
ಮೋದಿಗೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ,. ದೇಶದ ಸಂವಿಧಾನ ಹಾಗೂ ಕಾನೂನು ಸಂಸ್ಥೆಗಳ ಮೇಲೆ ನಂಬಿಕೆಯಿಲ್ಲ. ಹೀಗಾಗಿ ಯೋಜನೆ ಆಯೋಗ ಸೇರಿದಂತೆ ಹಲವು ಸಂಸ್ಥೆಗಳನ್ನು ಸ್ವಲ್ಪ ಸ್ವಲ್ಪವಾಗಿ ನಾಶ ಮಾಡುತ್ತಿದ್ದಾರೆ. ವಿದೇಶಗಳೊಂದಿಗೆ ಸಂಬಂಧ ವೃದ್ಧಿ ಪಡಿಸಿಕೊಳ್ಳುವ ಬದಲು ಮೋದಿ ಹೆಜ್ಜೆ ಇಟ್ಟ ಕಡೆ ಎಲ್ಲಾ ಅಂತಾರಾಷ್ಟ್ರೀಯ ಸಂಬಂಧಗಳು ಹಾಳಾಗುತ್ತಿವೆ ಎಂದು ಆರೋಪಿಸಿದ್ದಾರೆ