ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಕೆ ಸಿಂಗ್ ಅವರು ಮಂಗಳವಾರ ಆಫ್ರಿಕನ್ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದು, ಭಾರತದಲ್ಲಿ ಅವರಿಗೆ ರಕ್ಷಣೆ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.
ಭಾರತದಲ್ಲಿ ಆಫ್ರಿಕನ್ ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಹಲ್ಲೆ ವಿರುದ್ದ ಆಫ್ರಿಕನ್ ಅಸೋಸಿಯೇಶನ್ ಆಫ್ ಸ್ಟೂಡೆಂಟ್ಸ್ ಇನ್ ಇಂಡಿಯಾ(ಎಎಎಸ್ಐ) ನವದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಅಫ್ರಿಕನ್ ವಿದ್ಯಾರ್ಥಿಗಳ ನಿಯೋಗದೊಂದಿಗೆ ಸಭೆ ನಡೆಸಿದ ಸುಷ್ಮಾ ಸ್ವರಾಜ್, ಅವರಿಗೆ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವರಾಜ್, ಅದೊಂದು ದೊಡ್ಡ ಘಟನೆ. ಆದರೆ ಜನಾಂಗೀಯ ಹಲ್ಲೆ ಅಲ್ಲ ಎಂದು ಅವರಿಗೆ ಮನವರಿಕೆ ಮಾಡಿಕೊಡಲು ನಾವು ಯತ್ನಿಸಿದೆವು ಎಂದರು.
ಕಾಂಗೋ ಪ್ರಜೆಯ ಸಾವು ದುರದೃಷ್ಟಕರ ಮಾತ್ರವಲ್ಲ, ತುಂಬಾ ನೋವಿನ ವಿಚಾರ. ಒಬ್ಬ ತಾಯಿಯಾಗಿ ಕಾಂಗೋ ವಿದ್ಯಾರ್ಥಿಯ ಪೋಷಕರ ನೋವು ನನಗೆ ಅರ್ಥವಾಗುತ್ತೆ ಎಂದು ಸುಷ್ಮಾ ಹೇಳಿದ್ದಾರೆ.
ಕಳೆದ ಮೇ 20ರಂದು ರಾಜಧಾನಿ ದೆಹಲಿಯ ವಸಂತ್ ಕುಂಜ್‌ನಲ್ಲಿ ಕಾಂಗೋ ವಿದ್ಯಾರ್ಥಿ ಮಸೊಂದಾ ಕೆಟಾಡ ಅಲಿವರ್ ಅವರನ್ನು ಹತ್ಯೆ ಮಾಡಲಾಗಿತ್ತು.