ಕೋಲ್ಕತಾ: ತುರ್ತುಪರಿಸ್ಥಿಯ ಬಳಿಕ ಇದೇ ಮೊದಲ ಬಾರಿಗೆ ಸುದ್ದಿ ವಾಹಿನಿಯೊಂದರ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ್ದು, ಸುದ್ದಿ ವಾಹಿನಿಯೊಂದರ ಮೇಲಿನ ನಿಷೇಧ ದೇಶದಲ್ಲಿ ತುರ್ತುಪರಿಸ್ಥಿತಿಯಂತಹ ಸನ್ನಿವೇಶಗಳು ಮರುಕಳಿಸಿದಂತಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಶುಕ್ರವಾರ ಹೇಳಿದ್ದಾರೆ.
ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಖ್ಯಾತ ಹಿಂದಿ ಸುದ್ದಿ ವಾಹಿನಿ ಎನ್ ಡಿಟಿವಿ ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸಿತ್ತು ಎಂದು ಹೇಳಿದ್ದ ಮಾಹಿತಿ ಮತ್ತು ತಂತ್ರಜ್ಞಾನದ ಆಂತರಿಕ ಸಮಿತಿಯು, ನ.9 ರಂದು ಯಾವುದೇ ರೀತಿಯ ಕಾರ್ಯಕ್ರಮಗಳ ಹಾಗೂ ಸುದ್ದಿ ಪ್ರಸಾರ ಮಾಡದಂತೆ ಆದೇಶವನ್ನು ನೀಡಿತ್ತು.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿಯವರು, ಎನ್ ಡಿಟಿವಿ ಮೇಲೆ ನಿಷೇಧ ಹೇರಿರುವುದು ನಿಜಕ್ಕೂ ಆಶ್ಚರ್ಯವನ್ನು ತಂದಿದೆ. ಪಠಾಣ್ ಕೋಟ್ ದಾಳಿ ಕುರಿತ ಸುದ್ದಿ ಪ್ರಸಾರದ ಮೇಲೆ ಸರ್ಕಾರಕ್ಕೆ ಸಮಸ್ಯೆಗಳಿದ್ದರೆ, ಅದಕ್ಕೆ ಅದರದೇ ಆದ ನಿಬಂಧನೆಗಳಿವೆ. ಅದರ ಅನುಸಾರವಾಗಿ ಸರ್ಕಾರ ನಡೆಯಬಹುದಿತ್ತು. ಆದರೆ, ಸುದ್ದಿ ವಾಹಿನಿಯ ಮೇಲೆ ನಿಷೇಧ ಹೇರಿರುವುದು ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸನ್ನಿವೇಶಗಳು ಮರುಕಳಿಹಿಸುಂತೆ ಮಾಡುತ್ತದೆ ಎಂದು ಹೇಳಿದ್ದಾರೆ.