ದೇಶ

ಭಾರತದಲ್ಲಿರುವ ಪಾಕ್ ರಾಯಭಾರಿ ಕಚೇರಿಯನ್ನು ಸ್ಥಗಿತಗೊಳಿಸಿ: ಕೇಂದ್ರಕ್ಕೆ ಶಿವಸೇನೆ

Manjula VN

ಮುಂಬೈ: ಭಾರತದ ವಿರುದ್ಧ ಪಾಕಿಸ್ತಾನ ಭಯೋತ್ಪಾದನಾ ಚಟುವಟಿಕೆಗಳನ್ನು ಮುಂದುವರೆಸುತ್ತಲೇ ಇದ್ದು, ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿವಸೇನೆ ಶುಕ್ರವಾರ ಆಗ್ರಹಿಸಿದೆ.

ಈ ಕುರಿತಂತೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದುಕೊಂಡಿರುವ ಶಿವಸೇನೆ, ಕೇಂದ್ರದ ಮೂಲಕವೇ ಪಾಕಿಸ್ತಾನ ಭಾರತದ ವಿರುದ್ಧ ಷಡ್ಯಂತ್ರಗಳನ್ನು ರಚಿಸುತ್ತಿದೆ. ಹೀಗಾಗಿ ನೆರೆ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಿದ್ದು, ಕೂಡಲೇ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಗಳನ್ನು ಸ್ಥಗಿತಗೊಳಿಸಬೇಕಿದೆ ಎಂದು ಹೇಳಿಕೊಂಡಿದೆ.

ಪಕ್ಷದ ನಿಲುವಿಗೆ ಬೆಂಬಲ ವ್ಯಕ್ತಪಡಿಸಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ಭಾರತದ ವಿರುದ್ಧ ಷಡ್ಯಂತ್ರಗಳನ್ನು ಮಾಡುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಸಾಕಷ್ಟು ಬಾರಿ ಮನವಿಯನ್ನು ಮಾಡಿಕೊಂಡಿದ್ದೇವೆ. ಭಾರತದಲ್ಲಿರುವ ಪಾಕಿಸ್ತಾನದ ವಾಣಿಜ್ಯ ಕೆಲಸಗಳು, ರಾಯಭಾರಿ ಕಚೇರಿಗಳು ಸೇರಿದಂತೆ ಇನ್ನಿತರೆ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ಈ ಬಾರಿಯೂ ಕೇಂದ್ರದ ಬಳಿ ಆಗ್ರಹಿಸುತ್ತಿದ್ದೇವೆಂದು ಹೇಳಿದ್ದಾರೆ.

ರಾಜಧಾನಿ ದೆಹಲಿಯಲ್ಲಿದ್ದುಕೊಂಡೇ ಭಾರತ ವಿರುದ್ಧ ಪಿತೂರಿ ನಡೆಸುತ್ತಿರುವ ಪಾಕಿಸ್ತಾನ ರಾಯಭಾರಿ ಕಚೇರಿಗಳನ್ನು ಮೊದಲು ಸ್ಧಗಿತಗೊಳಿಸಬೇಕಿದೆ. ಕೇಂದ್ರದಲ್ಲಿದ್ದುಕೊಂಡೇ ಪಾಕಿಸ್ತಾನ ಭಾರತದ ವಿರುದ್ಧ ಪಿತೂರಿಗಳನ್ನು ನಡೆಸುತ್ತಿದೆ. ಪಾಕಿಸ್ತಾನ ರಾಯಭಾರಿ ಕಚೇರಿಗಳನ್ನು ಸ್ಥಗಿತಗೊಳಿಸುವ ಧೈರ್ಯ ಕೇಂದ್ರಕ್ಕಿದೆಯೇ? ಎಂದು ಪ್ರಶ್ನಿಸಿದ್ದಾರೆ.

SCROLL FOR NEXT