ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿಯಲ್ಲಿ ದಟ್ಟ ಹೊಗೆ ಆವರಿಸಿರುವ ಸಮಸ್ಯೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
"ದೆಹಲಿ ಸಂಪೂರ್ಣವಾಗಿ ಗ್ಯಾಸ್ ಚೇಂಬರ್ ಆಗಿದೆ, ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮ ಸಹ ದೆಹಲಿಯನ್ನು ಆವರಿಸಿರುವ ದಟ್ಟ ಹೊಗೆ ನಿಯಂತ್ರಣಕ್ಕೆ ಸಹಕಾರಿಯಾಗುವುದಿಲ್ಲ ಎಂದು ಪ್ರಾಥಮಿಕ ಅಧ್ಯಯನ ವರದಿಗಳು ತಿಳಿಸಿವೆ. ಕೇಂದ್ರ ಸರ್ಕಾರ ದೆಹಲಿಯ ದಟ್ಟ ಹೊಗೆ ಸಮಸ್ಯೆಯನ್ನು ನಿಯಂತ್ರಿಸಲು ಮಧ್ಯಪ್ರವೇಶಿಸಬೇಕು ಎಂದು ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಪಂಜಾಬ್ ಮತ್ತು ಹರ್ಯಾಣದಿಂದ ಮಾಲಿನ್ಯಗೊಂಡ ಹೊಗೆ ಅಪಾರ ಪ್ರಮಾಣದಲ್ಲಿ ದೆಹಲಿಯತ್ತ ಬಂದಿದ್ದು, ದಟ್ಟ ಹೊಗೆ ಆವರಿಸಿರುವ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವುದು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇಟ್ಟಿಗೆ ಭಟ್ಟಿಗಳನ್ನು ಮುಚ್ಚುವಂತೆ ಸೂಚಿಸಬೇಕು ಮತ್ತು ದೆಹಲಿ ಭದ್ರಾಪುರ ಕೈಗಾರಿಕಾ ಘಟಕದಿಂದ ಹಾರುಬೂದಿ ವಾತಾವರಣ ಸೇರುವುದಕ್ಕೆ ತಡೆ ಸೇರಿದಂತೆ ವಾಯ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪರಿಸರ ಸಚಿವಾಲಯ ದೆಹಲಿ ಸರ್ಕಾರಕ್ಕೆ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ದೆಹಲಿ ಸರ್ಕಾರ ಹೊಗೆ ದಟ್ಟಣೆಯನ್ನು ತಡೆಗಟ್ಟಲು ಕೆಲವೇ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ, ಕೇಂದ್ರ ಸರ್ಕಾರ ಸಹ ಈ ಸಮಸ್ಯೆ ಬಗೆಹರಿಸಲು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.