ನವದೆಹಲಿ: ಆರ್ಥಿಕತೆ ಮತ್ತಷ್ಟು ತೆರೆಯುವ ಅಗತ್ಯಕ್ಕೆ ಪ್ರಾಮುಖ್ಯತೆ ನೀಡುವ ಅಗತ್ಯವಿದೆ ಎಂದು ಹೇಳಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಹೆಚ್ಚು ಹೂಡಿಕೆಯನ್ನು ಆಕರ್ಷಿಸಲು ಮತ್ತು ಮೂಲಸೌಕರ್ಯ ಕೊರತೆಯನ್ನು ತುಂಬಲು ಸುಧಾರಣಾ ಕ್ರಮಗಳಿಗೆ ಕೇಂದ್ರ ಕ್ರಮ ತೆಗೆದುಕೊಳ್ಳಲಿದೆ. ಅಭಿವೃದ್ಧಿ ವಲಯದಲ್ಲಿ ಹೆಚ್ಚಿನ ಅತೃಪ್ತಿಯಿದೆ ಎಂದು ಪ್ರತಿಪಾದಿಸಿದ್ದಾರೆ.
ಅವರು ಇಂದು ದೆಹಲಿಯಲ್ಲಿ ಭಾರತ-ಯುಕೆ ಟೆಕ್ ಶೃಂಗಸಭೆಯಲ್ಲಿ ಮಾತನಾಡಿ, ಭಾರತ ದೇಶ ಆರ್ಥಿಕತೆಯಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದರೂ ಕೂಡ ನಮ್ಮದೇ ಗುಣಮಟ್ಟ ನೋಡಿದಾಗ ನಾವು ತೃಪ್ತರಾಗಿಲ್ಲ. ಭಾರತದಲ್ಲಿ ಹೆಚ್ಚಿನ ಪ್ರಮಾಣದ ಅತೃಪ್ತಿಯಿದ್ದು, ನಾವು ಇನ್ನಷ್ಟು ವೇಗವಾಗಿ ಬೆಳವಣಿಗೆ ಹೊಂದಬಹುದು ಎಂದು ಜೇಟ್ಲಿ ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಏಳು ದಶಕಗಳು ಕಳೆದ ನಂತರ ಭಾರತದ ಧ್ವನಿ ವಿಶ್ವಕ್ಕೆ ಕೇಳಿಸುತ್ತಿದೆ. ಹಾಗಾಗಿ ಇನ್ನಷ್ಟು ಸುಧಾರಣೆ ತರಲು ಹೂಡಿಕೆಯಲ್ಲಿ ಹೆಚ್ಚಿನ ಆಕರ್ಷಣೆ ತರಲು, ಉತ್ಪಾದನೆ ಕ್ಷೇತ್ರದಲ್ಲಿ ಹೆಚ್ಚು ವಿಸ್ತರಣೆ ಮಾಡಿಕೊಳ್ಳಲು ಮೂಲಸೌಕರ್ಯ ಕೊರತೆಯನ್ನು ಹೆಚ್ಚು ಬೇಗನೆ ತುಂಬಲು ನಾವು ಇನ್ನಷ್ಟು ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ ಎಂದರು.
ಭಾರತ ಈ ಹಿಂದೆ ಅನೇಕ ಅವಕಾಶಗಳನ್ನು ಕಳೆದುಕೊಂಡಿದೆ, ಇನ್ನು ಮುಂದೆಯಾದರೂ ಭಾರತ ಉತ್ಸಾಹಿ ದೇಶವೆನಿಸಿಕೊಳ್ಳಬೇಕಾದರೆ ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.