ದೇಶ

ಕಪ್ಪುಹಣದ ವಿರುದ್ಧ ಯುದ್ಧ ಆರಂಭವಾಗಿದೆ: ವೆಂಕಯ್ಯ ನಾಯ್ಡು

Manjula VN

ನವದೆಹಲಿ: ರು. 500 ಹಾಗೂ 1,000 ನೋಟು ಚಲಾವಣೆ ಬಂದ್ ನಿಂದ ಪ್ರಮಾಣಿಕ ಜನರಿಗೆ ಸಮಸ್ಯೆಯಿಲ್ಲ, ಆದರೆ, ಅಕ್ರಮ ಹಣವನ್ನು ಹೊಂದಿರುವ ಭ್ರಷ್ಟ ಜನರಿಗಷ್ಟೇ ಇದರಿಂದ ತಲೆನೋವು ಎದುರಾಗಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಬುಧವಾರ ಹೇಳಿದ್ದಾರೆ.

ಕಪ್ಪು ಹಣದ ವಿರುದ್ಧ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐತಿಹಾಸಿಕ ಕ್ರಾಂತಿಕಾರಿ ಹೆಜ್ಜೆಯೊಂದನ್ನು ತೆಗೆದುಕೊಂಡುದ್ದು, ಈ ನಿರ್ಧಾರ ಮೂಲಕ ಸಾರ್ವಜನಿಕರ ಜೀವನದ ಹಾದಿಯನ್ನು ಸುಗಮವಾಗಿಸಿದ್ದಾರೆ. ಮೋದಿಯವರ ನಿರ್ಧಾರಕ್ಕೆ ಈ ಮೂಲಕ ಧನ್ಯವಾದ ಸೂಚಿಸುತ್ತಿದ್ದೇನೆಂದು ಹೇಳಿದ್ದಾರೆ.

ಸಾರ್ವಜನಿಕರು ತಮ್ಮ ಹಣವನ್ನು ಪರಿವರ್ತಿಸಿಕೊಳ್ಳುವುದಕ್ಕೆ ಪ್ರಧಾನಿ ಮೋದಿಯವರು ಸಮಯಾವಕಾಶವನ್ನು ನೀಡಿದ್ದಾರೆ. ರು.500 ಹಾಗೂ 1,000 ನೋಟ್ ಬಂದ್ ನಿರ್ಧಾರ ಕೇವಲ ಕಪ್ಪುಹಣದ ಬೇರನ್ನು ಕಿತ್ತುಹಾಕುವ ಪ್ರಯತ್ನವಾಗಿದೆ. ಕೇಂದ್ರದ ಈ ನಿರ್ಧಾರದಿಂದ ಪ್ರಾಮಾಣಿಕ ಜನರಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ, ಅಕ್ರಮ ಹಣವನ್ನು ಹೊಂದಿರುವ ಭ್ರಷ್ಟ ಜನರಿಗೆ ಮಾತ್ರ ಇದರಿಂದ ಸಮಸ್ಯೆಯುಂಟಾಗಲಿದೆ ಎಂದಿದ್ದಾರೆ.

ಕೇಂದ್ರದ ಈ ನಿರ್ಧಾರದಿಂದ ಇಡೀ ದೇಶದ ಜನತೆ ಸಂತಸವನ್ನು ವ್ಯಕ್ತಪಡಿಸುತ್ತಿದೆ. ಪ್ರಧಾನಿ ಮೋದಿಯವರ ಐತಿಹಾಸಿಕ ನಿರ್ಧಾರಕ್ಕೆ ಜನರು ಶುಭಾಶಯಗಳ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಭ್ರಷ್ಟ ಜನರು ಇಂದು ಕಣ್ಣೀರಿಡುವ ದಿನ ಎದುರಾಗಿದೆ. ಭ್ರಷ್ಟರ ಸುಖಭರಿತ ನಿದ್ರೆಗೆ ಇದೀಗ ಭಂಗ ಎದುರಾಗಿದೆ. ಪ್ರಾಮಾಣಿಕರಿಗೆ ಸಮಸ್ಯೆಯಿಲ್ಲ. ಕಪ್ಪುಹಣ ವಿರುದ್ಧದ ಯುದ್ಧ ಇದೀಗ ಆರಂಭವಾಗಿದೆ. ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

SCROLL FOR NEXT