ಲಖನೌ: ದಲಿತ ವಿರೋಧಿ ಬಿಜೆಪಿಯು ನೋಟಿನ ಮೇಲೆ ನಿಷೇಧ ಹೇರುವ ಮೂಲಕ ದೇಶದಲ್ಲಿ ತುರ್ತುಪರಿಸ್ಥಿತಿಯಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ಬಿಎಸ್ ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಗುರುವಾರ ಹೇಳಿದ್ದಾರೆ.
ದುಬಾರಿ ಬೆಲೆ ನೋಟಿನ ಮೇಲೆ ಕೇಂದ್ರ ಮೋದಿ ಸರ್ಕಾರ ನಿಷೇಧ ಹೇರಿರುವ ನಿರ್ಧಾರದ ಕುರಿತಂತೆ ಇಂದು ಕಿಡಿಕಾಡಿರುವ ಅವರು, ನರೇಂದ್ರ ಮೋದಿಯವರ ಈ ನಿರ್ಧಾರ ಸ್ವಾರ್ಥತೆಯ ನಿರ್ಧಾರವಾಗಿದೆ. ಬಿಜೆಪಿ ನೇತೃತ್ವ ಎನ್ ಡಿಎ ಸರ್ಕಾರ ಕಳೆದ ಎರಡು ವರ್ಷಗಳಿಂದಲೂ ಆಧಿಕಾರದಲ್ಲಿ ಇದೆ. ಈ ಎರಡು ವರ್ಷದಲ್ಲಿ ಕ್ರಮಕೈಗೊಳ್ಳದ ಕೇಂದ್ರ ಸರ್ಕಾರ ಈಗೇಕೆ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ.
ಉತ್ತರಪ್ರದೇಶದಲ್ಲಿ ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದಿಂದಾಗಿ ಎದುರಾಗುತ್ತಿರುವ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಹಾಗೂ ತಮ್ಮ ಅಸಮರ್ಥತೆಯನ್ನು ಬಚ್ಚಿಡುವ ಸಲುವಾಗಿ ಮೋದಿ ಸರ್ಕಾರ ಈ ರೀತಿಯ ನಿರ್ಧಾರವನ್ನು ಕೈಗೊಂಡಿದೆ. ತಮ್ಮ ವೈಫಲ್ಯವನ್ನು ಮುಚ್ಚಿಡುವ ಪ್ರಯತ್ನಗಳನ್ನು ಆಡಳಿತಾರೂಢ ಸರ್ಕಾರ ಮಾಡುತ್ತಿದೆ. ಮೋದಿಯವರ ಈ ನಿರ್ಧಾರದಿಂದ ಗುಜರಾತ್ ಹಾಗೂ ಮುಂಬೈ ನಗರಿಯ ಜನತೆಗೆ ಲಾಭವಾಗಲಿದೆ.
ದೇಶವನ್ನು ಭ್ರಷ್ಟಾಚಾರ ಮುಕ್ತವಾಗಿ ಮಾಡುತ್ತೇವೆಂದು ಹೇಳುವ ಮೂಲಕ ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಏನನ್ನು ಮಾಡಿತ್ತೋ ಅದನ್ನೇ ಇದೀಗ ಬಿಜೆಪಿ ಪಕ್ಷ ಮಾಡುತ್ತಿದೆ. ನೋಟಿನ ಮೇಲೆ ನಿಷೇಧ ಹೇರುವ ಮೂಲಕ ದೇಶದಲ್ಲು ತುರ್ತುಪರಿಸ್ಥಿತಿಯಂತಹ ಪರಿಸ್ಥಿತಿಯನ್ನು ಸೃಷ್ಟಿಮಾಡಿದೆ ಎಂದಿದ್ದಾರೆ.
ಮೋದಿಯವರ ಈ ನಿರ್ಧಾರದಿಂದ ಶೇ.90 ರಷ್ಟು ಜನರು ಅಸಂತಸವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಎರಡೂವರೆ ವರ್ಷದಿಂದಲೂ ಮೋದಿ ಸರ್ಕಾರ ದೊಡ್ಡ ಉದ್ಯಮಿಗಳಿಗೆ ಲಾಭವನ್ನು ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ ದಲಿತರ ಬಗ್ಗೆ ನಿರ್ಲಕ್ಷ್ಯವನ್ನು ತೋರುತ್ತಿದೆ. ಸರ್ಕಾರ ತನ್ನ ನಿರ್ಧಾರವನ್ನು ಹೊರಹಾಕುತ್ತಿದ್ದಂತೆಯೇ ಔಷಧಿ ಮಳಿಗೆಗಳಲ್ಲಿ ಔಷಧಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ಈ ನಿರ್ಧಾರದಿಂದ ಜನರಿಗೆ ಸಂಕಷ್ಟ ಎದುರಾಗಿದೆ. ವ್ಯಾಪಾರ, ವ್ಯವಹಾರ ವಹಿವಾಟುಗಳನ್ನು ನಡೆಸಲು ಸಾಧ್ಯವಾಗೆದ ಇಷ್ಟವಿಲ್ಲದಿದ್ದರೂ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ತಿಳಿಸಿದ್ದಾರೆ.