ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಅಂಬಾಲಾ: ಭಾರತ ದೇಶ ಶಾಂತಿಗೆ ಬದ್ಧವಾಗಿದೆ, ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ತನ್ನ ಸಶಸ್ತ್ರ ಪಡೆಗಳ ಶಕ್ತಿಯನ್ನು ಬಳಸಿಕೊಳ್ಳುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ರಾಷ್ಟ್ರದ ಮರ್ಯಾದೆ ಕಾಪಾಡಲು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಭಾರತ ಪ್ರಯತ್ನಿಸುತ್ತಿದೆ. ನಾವು ಶಾಂತಿಗೆ ಬದ್ಧವಾಗಿದ್ದರೂ ಕೂಡ ನಮ್ಮ ದೇಶದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ನಮ್ಮೆಲ್ಲಾ ಶಕ್ತಿಯನ್ನು ಬಳಸಿಕೊಳ್ಳುತ್ತೇವೆ, ನಮ್ಮ ದೇಶದ ಸವಾಲುಗಳನ್ನು ಸೇನಾಪಡೆಯ ಮಹಿಳಾ ಮತ್ತು ಪುರುಷ ಯೋಧರು ಬಹಳ ಸಮರ್ಥವಾಗಿ ಎದುರಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು.
ದೇಶದ ಸೇನಾ ಪಡೆಯ ಸುಪ್ರೀಂ ಕಮಾಂಡರ್ ಆಗಿರುವ ರಾಷ್ಟ್ರಪತಿ, ಭಾರತೀಯ ವಾಯುಪಡೆಯ 501 ಸಿಗ್ನಲ್ಸ್ ಯೂನಿಟ್ ಮತ್ತು 30 ಸ್ಕ್ವಾಡ್ರನ್ ಗೆ ಸ್ಟಾಂಡರ್ಡ್ಸ್ ಪ್ರದಾನ ಮಾಡಿ ಮಾತನಾಡಿದರು.
ಸುಕೊಯ್ -30 ಎಂಕೆಐ ಯುದ್ಧ ವಿಮಾನದ ಹೋರಾಟದ ವೇಳೆ ಕಾರ್ಯನಿರ್ವಹಣೆಗೆ 30 ಸ್ಕ್ವ್ಯಾಡ್ರನ್ ಬಳಸಲಾಗುತ್ತಿದ್ದು ದೀರ್ಘಾವಧಿಯವರೆಗೆ ಭಾರತೀಯ ಸೇನೆಗೆ ನಿಷ್ಠೆ ಮತ್ತು ಪ್ರಾಮಾಣಿಕತೆಯಲ್ಲಿ ಸೇವೆ ಸಲ್ಲಿಸಿದ ಸೇನಾ ಪಡೆಗಳಿಗೆ ರಾಷ್ಟ್ರಪತಿಗಳ ಸ್ಟಾಂಡರ್ಡ್ ನೀಡಲಾಗುತ್ತದೆ.
ಭಾರತೀಯ ವಾಯುಪಡೆಯ 30 ಸ್ಕ್ವ್ಯಾಡ್ರನ್ ನವೆಂಬರ್ 1, 1969ರಲ್ಲಿ ಆರಂಭಗೊಂಡಿತ್ತು. ಇದರ ಘಟಕ ಪ್ರಸ್ತುತ ಪುಣೆಯಲ್ಲಿದ್ದು ದಕ್ಷಿಣ ಪಶ್ಚಿಮ ಏರ್ ಕಮಾಂಡರ್ ಸುಪರ್ದಿಯಲ್ಲಿದೆ.