ದೇಶ

500 ಮತ್ತು 1000 ನೋಟು ನಿಷೇಧ: 55 ಲಕ್ಷ ಹಣ ಹೋಯಿತೆಂದು ಮಹಿಳೆ ಆತ್ಮಹತ್ಯೆ

Shilpa D

ತೆಲಂಗಾಣ: ಕೇಂದ್ರ ಸರ್ಕಾರ 500 ರೂ ಮತ್ತು 1000 ರೂಪಾಯಿ ನೋಟುಗಳ ಚಲಾವಣೆ ರದ್ದುಗೊಳಿಸಿದೆ ಎನ್ನುವ ಸುದ್ದಿಯಿಂದ ಆಘಾತಗೊಂಡ ಮಹಿಳೆಯೊಬ್ಬರು ಗೊಂದಲದಲ್ಲಿ ತಮ್ಮ ಜೀವವನ್ನೆ ಕಳೆದುಕೊಂಡಿರುವ ಘಟನೆ ತೆಲಂಗಾಣಾದ ಮೆಹಬೂಬಾಬಾದ್ ಪಟ್ಟಣದ ಶನಿಗಾಪೂರಂ ಗ್ರಾಮದಲ್ಲಿ ನಡೆದಿದೆ.

ತನ್ನ ಮನೆಯಲ್ಲಿರುವ 500 ಮತ್ತು ಸಾವಿರ ರೂಪಾಯಿ ನೋಟುಗಳು ಕೆಲಸಕ್ಕೆ ಬಾರದ ಕಾಗದದ ಚೂರುಗಳು ಎಂದು ತಿಳಿದು ಕೊಂಡು ಅನಕ್ಷರಸ್ಥ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
 
ಪೊಲೀಸ್ ಮೂಲಗಳ ಪ್ರಕಾರ, ಮಹಿಳೆ ಕೆ.ವಿನೋದಾ ಮತ್ತು ಆಕೆಯ ಪತಿ ಉಪೇಂದ್ರಿಯಾ ಕಳೆದ ಮೂರು ತಿಂಗಳುಗಳ ಹಿಂದೆ 12 ಎಕರೆ ತೋಟವನ್ನು 55 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದರು. ಮತ್ತೊಂದು ತೋಟವನ್ನು ಖರೀದಿಸಬೇಕು ಎನ್ನುವ ಉದ್ದೇಶದಿಂದ ಬ್ಯಾಂಕ್‌ನಲ್ಲಿ ಹಣ ಠೇವಣಿ ಮಾಡದೆ ತಂದು ಮನೆಯಲ್ಲಿಟ್ಟಿದ್ದರು. ಹಣ ಚಲಾವಣೆಯಾಗುವುದಿಲ್ಲ ಎಂಬ ವಿಷಯದಲ್ಲಿ ಗಂಡ ಹೆಂಡತಿ ಇಬ್ಬರು ಜಗಳ ಮಾಡಿಕೊಂಡು ವಿನೋದಾ ನೇಣಿಗೆ ಶರಣಾಗಿದ್ದಾಳೆ ವರದಿಯಾಗಿದೆ.

ತನ್ನ ತಾಯಿ ಅನಕ್ಷರಸ್ಥೆಯಾಗಿದ್ದು, ನೋಟು ವಿನಿಮಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಸಾವಿಗೆ ಶರಣಾಗಿದ್ದಾರೆ ಎಂದು ಆಕೆಯ ಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

SCROLL FOR NEXT