ದೇಶ

ಸೌಮ್ಯ ಕೊಲೆ ಪ್ರಕರಣ: ಸುಪ್ರೀಂನಿಂದ ನಿವೃತ್ತ ನ್ಯಾ. ಕಾಟ್ಜುಗೆ ನ್ಯಾಯಾಂಗ ನಿಂದನೆ ನೋಟಿಸ್

Lingaraj Badiger
ನವದೆಹಲಿ: ಸೌಮ್ಯ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಗಂಭೀರ ತಪ್ಪು ಮಾಡಿದೆ ಎಂದಿದ್ದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರಿಗೆ ಸರ್ವೋಚ್ಚ ನ್ಯಾಯಾಲಯದ ಶುಕ್ರವಾರ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. 
2011 ರಲ್ಲಿ ನಡೆದ ಕೇರಳದ ಸೌಮ್ಯಾ ಎಂಬ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಪರಾಧಿಯ ಶಿಕ್ಷೆ ಅವಧಿಯನ್ನು ಸುಪ್ರೀಂ ಕೋರ್ಟ್ ಕಡಿಮೆಗೊಳಿಸಿತ್ತು. ಈ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಸೌಮ್ಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸುವಲ್ಲಿ ಸುಪ್ರೀಂಕೋರ್ಟ್ ಎಡವಿದೆ. ಈ ತೀರ್ಪನ್ನು ಪುನರ್ ಪರಿಶೀಲಿಸಬೇಕು ಎಂದು ಹೇಳಿದ್ದರು.
ಈ ಸಂಬಂಧ ಇಂದು ತಮ್ಮ ನಿಲುವನ್ನು ವ್ಯಕ್ತಪಡಿಸಲು ನ್ಯಾಯಾಲಯದೆದುರು ಹಾಜರಾದ ಕಾಟ್ಜು ಅವರು ಪ್ರತಿಕ್ರಿಯೆ ಸಲ್ಲಿಸಲು ಎಂಟು ದಿನಗಳ ಕಾಲವಕಾಶ ಕೇಳಿದರು. ಆದರೆ ಇದಕ್ಕೆ ಒಪ್ಪದ ನ್ಯಾಯಮೂರ್ತಿಗಳಾದ ರಂಜನ್ ಗೋಗೊಯಿ, ಪ್ರಫುಲ್ ಸಿ ಪಂಥ್ ಹಾಗೂ ಉದಯ್ ಉಮೇಶ್ ಲಲಿತ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ನೀವು ಹೇಳಿಕೆ ನೀಡಿರುವುದು ತೀರ್ಪಿನ ಬಗ್ಗೆಯಲ್ಲ. ಬದಲಿಗೆ ತೀರ್ಪು ನೀಡಿದ ನ್ಯಾಯಾಧೀಶರ ಬಗ್ಗೆಯೆಂದು ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ್ದಾರೆ.
ಸೌಮ್ಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿ ಗೋವಿಂದಸ್ವಾಮಿಗೆ ಕೆಳ ಹಂತದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಸೂಕ್ತ ಸಾಕ್ಷಾಧಾರವಿಲ್ಲದಿರುವುದರಿಂದ ಸುಪ್ರೀಂಕೋರ್ಟ್ ಶಿಕ್ಷೆಯನ್ನು 14 ವರ್ಷಕ್ಕಿಳಿಸಿತ್ತು.
SCROLL FOR NEXT