ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500, 1000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ರದ್ದುಗೊಳಿಸಿರುವ ಕ್ರಮ ಆತುರದ ನಿರ್ಧಾರವಾಗಿದ್ದು, ಇದರಿಂದಾಗಿ ಇಡೀ ದೇಶ ಸಮಸ್ಯೆಗೆ ಸಿಲುಕಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ನೋಟುಗಳನ್ನು ನಿಷೇಧಿಸಿರುವುದು ಆತುರದ ಹಾಗೂ ಯೋಜಿತವಲ್ಲದ ನಿರ್ಧಾರವಾಗಿದ್ದು, ಹಳೆಯ ಕಪ್ಪುಹಣ ಈಗ ಮತ್ತೊಂದು ರೀತಿಯಲ್ಲಿ ಪರಿವರ್ತನೆಯಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ನೋಟುಗಳ ನಿಷೇಧವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಟೊಳ್ಳು ಭರವಸೆ ಎಂದು ಕಬಿಲ್ ಸಿಬಲ್ ಆರೋಪಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರ ಜಪಾನ್ ಪ್ರವಾಸದ ಬಗ್ಗೆಯೂ ಮಾತನಾಡಿರುವ ಮಾಜಿ ಕೇಂದ್ರ ಸಚಿವ, ದೇಶ ಅವ್ಯವಸ್ಥೆ, ಗೊಂದಲದಲ್ಲಿ ಸಿಲುಕಿರಬೇಕಾದರೆ, ದೇಶದಲ್ಲಿರುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರವಾಸ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಸಾಮಾನ್ಯ ವ್ಯಕ್ತಿ ಎಂದು ಹೇಳಿಕೊಳ್ಳುತ್ತಾರೆ. ಆದರೆ ಈ ವರೆಗೂ ಎಂದಿಗೂ ಎಟಿಎಂ ನಲ್ಲಿ ಕ್ಯೂ ನಿಂತ ಉದಾಹರಣೆಗಳಿಲ್ಲ. ಅವರಿಗೆ ಪ್ರದಿನಿತ್ಯ ಬಳಕೆಯ ಆಹಾರ ಪದಾರ್ಥಗಳ ಬೆಲೆಯೂ ಗೊತ್ತಿಲ್ಲ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೋಟನ್ನು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕ್ ಮುಂದೆ ಕ್ಯೂ ನಿಂತ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನಿ ಮೋದಿ ಅವರ ನಿರ್ಧಾರವನ್ನು ಆತುರದ, ಯೋಜಿತವಲ್ಲದ ನಿರ್ಧಾರ ಎಂದು ಟೀಕಿಸಿದೆ.