ದೇಶ

ದೇಶದಲ್ಲಿ ಉಪ್ಪಿನ ಕೊರತೆ: ವದಂತಿ ಎಂದ ಕೇಂದ್ರ ಸರ್ಕಾರ

Manjula VN

ನವದೆಹಲಿ: ದೇಶದಲ್ಲಿ ಉಪ್ಪಿನ ಕೊರತೆಯುಂಟಾಗಿದೆ ಎಂಬ ವದಂತಿ ಕುರಿತಂತೆ ಕೇಂದ್ರ ಸರ್ಕಾರ ಕಿಡಿಕಾರಿದ್ದು, ದೇಶದಲ್ಲಿ ಯಾವುದೇ ರೀತಿಯ ಉಪ್ಪಿನ ಕೊರತೆಯಿಲ್ಲ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಶನಿವಾರ ಹೇಳಿದೆ.

ಉತ್ತರ ಪ್ರದೇಶ ಹಾಗೂ ರಾಜಧಾನಿ ನವದೆಹಲಿಯ ಹಲವೆಡೆ ಉಪ್ಪಿನ ಕೊರತೆ ಉಂಟಾಗಿದ್ದು, ದುಬಾರಿ ಹಣವನ್ನು ನೀಡಿ ಉಪ್ಪನ್ನು ಖರೀದಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿತ್ತು.

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಮ್ ವಿಲಾಸ್ ಪಾಸ್ವಾನ್ ಅವರು, ದೇಶದಲ್ಲಿ ಸಾಕಷ್ಟು ಉಪ್ಪಿದೆ. ದೇಶದಲ್ಲಿ ಯಾವುದೇ ರೀತಿಯ ಉಪ್ಪಿನ ಕೊರತೆ ಎದುರಾಗಿಲ್ಲ. ಎಂದಿನಂತೆ ಉಪ್ಪಿನ ದರ ಕೂಡ ಸಾಮಾನ್ಯವಾಗಿಯೇ ಇದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಈ ರೀತಿಯ ತಪ್ಪು ಮಾಹಿತಿಗಳನ್ನು ನೀಡಿರುವುದು ನಿಜಕ್ಕೂ ಸರಿಯಲ್ಲ. ಉಪ್ಪು, ಅಕ್ಕಿ, ಸಕ್ಕರೆ, ಕಾಳುಬೇಳೆಗಳ ಬೆಲೆಯಲ್ಲಿ ಯಾವುದೇ ರೀತಿಯ ಕೊರತೆಗಳಿಲ್ಲ. ಜನತೆಯಲ್ಲಿ ಭಯವನ್ನು ಹುಟ್ಟಿಸಿರುತ್ತಿರುವವರ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೂಡಲೇ ಕ್ರಮಕೈಗೊಳ್ಳಬೇಕಿದೆ. ಅಲ್ಲದೆ, ಉಪ್ಪನ್ನು ಕೆಜಿಗೆ ರು.200ಕ್ಕೆ ಮಾರಾಟ ಮಾಡಿದ ಅಂಗಡಿ ಮಾಲೀಕರ ವಿರುದ್ಧವೂ ಅಲ್ಲಿನ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕಿದೆ ಎಂದಿದ್ದಾರೆ.
 
ಉತ್ತರಪ್ರದೇಶ ಚುನಾವಣೆ ಹತ್ತಿರದಲ್ಲಿಯೇ ಇದ್ದು, ಪ್ರಕರಣದಲ್ಲಿ ರಾಜಕೀಯ ಆಟವಾಡಿರುವುದು ಸ್ಪಷ್ಟವಾಗುತ್ತಿದೆ. ಕೇಂದ್ರದ ವರ್ಚಸ್ಸನ್ನು ಹಾಳು ಮಾಡುವ ಸಲುವಾಗಿ ಈ ರೀತಿಯ ಸುದ್ದಿಗಳನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಈ ರೀತಿಯ ವದಂತಿಗಳ ಕಡೆಗೆ ಗಮನ ನೀಡಬಾರದು ಎಂದು ತಿಳಿಸಿದ್ದಾರೆ.

SCROLL FOR NEXT