ಮುಂಬೈ: ಶೀಘ್ರದಲ್ಲೇ ಎಸ್ ಬಿಐ ಎಟಿಎಂಗಳಲ್ಲಿ 20 ಮತ್ತು 50 ರು. ಮುಖಬೆಲೆಯ ನೋಟುಗಳು ಲಭ್ಯವಾಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.
ನೋಟು ನಿಷೇಧ ಬಳಿಕ ದೇಶಾದ್ಯಂತ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಆರ್ ಬಿಐ ಸೇರಿದಂತೆ ವಿವಿಧ ಬ್ಯಾಂಕುಗಳ ಹರಸಾಹಸ ಪಡುತ್ತಿದ್ದು, ನೋಟು ನಿಷೇಧದ ಬಳಿಕ ಉಂಟಾಗಿರುವ ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದಷ್ಟು ಕ್ರಮಗಳನ್ನು ಕೈಗೊಂಡಿದೆ. ಅದರಂತೆ ಕೆಲವೇ ದಿನಗಳಲ್ಲಿ ಎಸ್ ಬಿಐ ನ ಎಟಿಎಂಗಳಲ್ಲಿ 20 ಹಾಗೂ 50 ರು.ಗಳ ನೋಟುಗಳು ಲಭ್ಯವಾಗಲಿದೆ ಎಂದು ತಿಳಿದಬಂದಿದೆ.
ಈ ಬಗ್ಗೆ ಸ್ವತಃ ಎಸ್ ಬಿಐನ ಮುಖ್ಯಸ್ಥ ಅರುಂಧತಿ ಭಟ್ಟಾಚಾರ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಟಿಎಂಗಳಲ್ಲಿ 20 ಮತ್ತು 50 ರುಗಳ ನೋಟುಗಳ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ನೋಟು ನಿಷೇಧದ ಬಳಿಕ ಎಟಿಎಂಗಳ ಕಾರ್ಯನಿರ್ಹವಣೆಯಲ್ಲಿ ಶೇ.50ರಷ್ಚು ಮಾತ್ರ ವ್ಯವಹಾರ ನಡೆಯುತ್ತಿದ್ದು, ಶೀಘ್ರದಲ್ಲೇ ಕಡಿಮೆ ಮೌಲ್ಯದ ನೋಟುಗಳನ್ನು ಎಟಿಎಂಗಳಲ್ಲಿ ಭರ್ತಿ ಮಾಡುವುದಾಗಿ ಅವರು ಹೇಳಿದ್ದಾರೆ.
"ನೋಟು ನಿಷೇಧ ಬಳಿಕ ದೇಶಾದ್ಯಂತ ಚಿಲ್ಲರೆ ಸಮಸ್ಯೆ ವ್ಯಾಪಕವಾಗಿದ್ದು, ಚಿಲ್ಲರೆ ಸಿಗದೇ ಜನ ಕಂಗಾಲಾಗಿದ್ದಾರೆ. ಹೀಗಾಗಿ ಎಟಿಎಂಗಳಲ್ಲಿ 20 ಮತ್ತು 50ರು.ಗಳ ನೋಟುಗಳನ್ನು ಭರ್ತಿ ಮಾಡಲು ಯೋಜಿಸಲಾಗಿದೆ. ಶೀಘ್ರದಲ್ಲೇ ಎಸ್ ಬಿಐ ಎಟಿಎಂಗಳಲ್ಲಿ ಕಡಿಮೆ ಮೌಲ್ಯದ ನೋಟುಗಳು ಲಭ್ಯವಾಗಲಿವೆ. ನವೆಂಬರ್ ಅಂತ್ಯಕ್ಕೆ ಪ್ರಸ್ತುತ ಎದುರಾಗಿರುವ ಸಮಸ್ಯೆಗಳು ಪರಿಹಾರವಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಎಟಿಎಂ ಕಾರ್ಯ ವೀಕ್ಷಣೆಗೆ ತಂಡ ರಚಿಸಿದ ಕೇಂದ್ರ
ಇದೇ ವೇಳೆ ದೇಶದ ಎಲ್ಲ ಎಟಿಎಂಗಳು ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ವಿಶೇಷ ಕಾರ್ಯಪಡೆ ತಂಡವನ್ನು ರಚಿಸಿದ್ದು, ಈ ತಂಡದಲ್ಲಿ ಆರ್ ಬಿಐ ನ ಕೆಲ ಅಧಿಕಾರಿಗಳು ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ. ಎಟಿಎಂಗಳ ಕಾರ್ಯನಿರ್ವಹಣೆ ಮತ್ತು ಹಣ ಭರ್ತಿ ಕುರಿತಂತೆ ಈ ತಂಡ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.