ಗ್ವಾಲಿಯರ್: 500 ಮತ್ತು 1000 ರು. ನೋಟು ನಿಷೇಧದ ಎಫೆಕ್ಟ್ ಕೇವಲ ಜನಸಾಮಾನ್ಯರಷ್ಟೇ ಅಲ್ಲ ಒಂದು ಕಾಲದಲ್ಲಿ ಗನ್ ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿದ್ದ ಚಂಬಲ್ ಕಣಿವೆಯ ಡಕಾಯಿತರ ಮೇಲೂ ಆಗಿದ್ದು, ಹೊಸ ನೋಟಿಗಾಗಿ ಬ್ಯಾಂಕಿನ ಮುಂದೆ ಸರತಿ ಸಾಲಲ್ಲಿ ನಿಲ್ಲುವಂತಾಗಿದೆ.
ಹೌದು...ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳ ಗಡಿ ಪ್ರದೇಶವಾದ ಮತ್ತು ಡಕಾಯಿತಿಗೆ ಕುಖ್ಯಾತಿ ಪಡೆದಿದ್ದ ಚಂಬಲ್ ಪ್ರಾಂತ್ಯದಲ್ಲಿ ಒಂದು ಕಾಲದಲ್ಲಿ ಗನ್ ಹಿಡಿದು ಭೀತಿ ಹುಟ್ಟಿಸಿದ್ದ ಮಾಲ್ಖನ್ ಸಿಂಗ್ ಎಂಬ ಮಾಜಿ ಡಕಾಯಿತ ಇದೀಗ ಹೊಸ ನೋಟಿಗಾಗಿ ಬ್ಯಾಂಕ್ ಮುಂದೆ ಸರತಿ ಸಾಲಲ್ಲಿ ನಿಂತ ಸುದ್ದಿ ಇದೀಗ ವೈರಲ್ ಆಗಿದೆ. ಮಾಜಿ ಡಕಾಯಿತ ಮಾಲ್ಖನ್ ಸಿಂಗ್ ನೋಟು ಬದಲಾವಣೆಗಾಗಿ ಗ್ವಾಲಿಯರ್ ನ ಎಸ್ ಬಿಐ ಬ್ಯಾಂಕ್ ನ ಮುಂದೆ ಸರತಿ ಸಾಲಲ್ಲಿ ನಿಂತಿರುವ ಕುರಿತು ನ್ಯೂಸ್ 18 ವರದಿ ಮಾಡಿದೆ.
ಒಂದು ಕಾಲದಲ್ಲಿ ಮಾಲ್ಖನ್ ಸಿಂಗ್ ಪತ್ತೆಗಾಗಿ ಮೂರು ರಾಜ್ಯಗಳ ಸರ್ಕಾರಗಳು ಲಕ್ಷಾಂತರ ಬಹುಮಾನ ಹಣ ಘೋಷಣೆ ಮಾಡಿತ್ತು. ಇಂತಹ ಮಾಲ್ಖನ್ ಸಿಂಗ್ ಇದೀಗ ಕೇವಲ 2 ಸಾವಿರ ರು.ಗಾಗಿ ಬ್ಯಾಂಕಿನ ಮುಂದೆ ಸರತಿ ಸಾಲಲ್ಲಿ ನಿಂತಿದ್ದಾರೆ. ಮಾಲ್ಖನ್ ಸಿಂಗ್ ಹಾಗೂ ಅವರ ಸಂಗಡಿಗರು ಗ್ಲಾಲಿಯರ್ ಎಸ್ ಬಿಐ ಬ್ಯಾಂಕಿನ ಮುಂದೆ ನೋಟು ಬದಲಾವಣೆಗಾಗಿ ಸರತಿ ಸಾಲಲ್ಲಿ ನಿಂತಿರುವ ಸುದ್ದಿ ಇದೀಗ ವೈರಲ್ ಆಗಿದೆ.
1970 ಮತ್ತು 80ರ ದಶಕದಲ್ಲಿ ಚಂಬಲ್ ಪ್ರಾಂತ್ಯದಲ್ಲಿ ಬೀಡುಬಿಟ್ಟು ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ಸರ್ಕಾರಗಳ ನಿದ್ದೆಗೆಡಿಸಿದ್ದ ಡಕಾಯಿತರ ಪಟ್ಟಿಯಲ್ಲಿ ಮಾಲ್ಖನ್ ಸಿಂಗ್ ಕೂಡ ಓರ್ವನಾಗಿದ್ದು, ಈತ 18 ಡಕಾಯಿತಿ, 17 ಕೊಲೆ, 19 ಹತ್ಯಾ ಪ್ರಯತ್ನ ಹಾಗೂ 28 ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿದ್ದ. ಕೆಲ ವರ್ಷಗಳ ಜೈಲು ವಾಸ ಕೂಡ ಅನುಭವಿಸಿದ್ದ ಮಾಲ್ಖನ್ ಸಿಂಗ್, 1976ರಲ್ಲಿ ಬಿಲಾವ್ ಗ್ರಾಮದ ಸರ್ ಪಂಚ್ ಕೈಲಾಶ್ ನಾರಾಯಣ್ ಅವರ ಕೊಲೆಗೆ ಸಂಚು ರೂಪಿಸಿದ್ದ, ಕೈಲಾಶ್ ನಾರಾಯಣ್ ಮತ್ತು ಅವರ ಗ್ಯಾಂಗ್ ಮೇಲಿನ ವೈಷಮ್ಯದ ಹಿನ್ನಲೆಯಲ್ಲಿ ಕೈಲಾಶ್ ನಾರಾಯಣ್ ಮೇಲೆ ಮಾಲ್ಖನ್ ಸಿಂಗ್ ಮತ್ತು ತಂಡ ಹಲವು ಬಾರಿ ಹತ್ಯಾ ಪ್ರಯತ್ನ ನಡೆಸಿತ್ತು. ಕೈಲಾಶ್ ನಾರಾಯಣ್ ರನ್ನು ಕೊಲ್ಲಲು ಮಾಲ್ಖನ್ ಸಿಂಗ್ ಯತ್ನಿಸಿದ್ದನಾದರೂ ಅದರಲ್ಲಿ ವಿಫಲನಾಗಿದ್ದ. ಈ ಪ್ರಕರಣದ ಬಳಿಕ ಪ್ರತಿದಾಳಿ ಭೀತಿಯಿಂದ ಮಾಲ್ಖನ್ ಸಿಂಗ್ ಉತ್ತರ ಪ್ರದೇಶದ ಜಲೌನ್ ಜಿಲ್ಲೆಗೆ ಪಲಾಯನ ಮಾಡಿದ್ದ.
ಬಳಿಕ 1983ರಲ್ಲಿ ಮಾಲ್ಖನ್ ಸಿಂಗ್ ಹಾಗೂ ಅವರ ತಂಡ ಅಂದಿನ ಮಧ್ಯಪ್ರದೇಶ ಮುಖ್ಯಮಂತ್ರಿ ಅರ್ಜುನ್ ಸಿಂಗ್ ಅವರ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಾಗ ಮಾಡಿ ಶರಣಾಗಿದ್ದರು. ಈ ಕಾರ್ಯಕ್ರಮ ವೀಕ್ಷಣೆಗೆ ಸುಮಾರು 30 ಸಾವಿರ ಮಂದಿ ಜನರು ನೆರೆದಿದ್ದರು. ಬಳಿಕ ಈತನನ್ನು ಬಂಧಿಸಲಾಗಿ ಕೆಲವೇ ವರ್ಷಗಳ ಬಳಿಕ ಮಾಲ್ಖನ್ ಸಿಂಗ್ ಹಾಗೂ ಈತನ ಸಹಚರರು ಸನ್ನಡೆತೆಯ ಆಧಾರದ ಮೇಲೆ ಬಿಡುಗಡೆಯಾಗಿದ್ದರು. ಮಾಲ್ಖನ್ ಸಿಂಗ್ ಗೆ ಮಧ್ಯ ಪ್ರದೇಶ ಸರ್ಕಾರ ಜಿವನೋಪಾಯಕ್ಕಾಗಿ ಕೃಷಿ ಭೂಮಿಯನ್ನು ಕೂಡ ನೀಡಿತ್ತು.
ಬಳಿಕ ಕೆಲವು ವರ್ಷಗಳ ನಂತರ ಸ್ಥಳೀಯ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಮಾಲ್ಖನ್ ಸಿಂಗ್ ಪ್ರತಿಸ್ಪರ್ಧೆಯೇ ಇಲ್ಲದೇ ಅವಿರೋಧವಾಗಿ ಗೆದ್ದಿದ್ದರು. ಮಾಲ್ಖನ್ ಸಿಂಗ್ ವಿರುದ್ಧ ಸ್ಪರ್ಧಿಸುವ ಧೈರ್ಯವನ್ನೂ ಕೂಡ ಯಾರೂ ಮಾಡಿರಲಿಲ್ಲ. ಇದೀಗ ಇದೇ ಮಾಲ್ಖನ್ ಸಿಂಗ್ ಜೀವನಾಧರಿಸಿದ ಚಿತ್ರವೊಂದು ಸೆಟ್ಟೇರಿದ್ದು, ನಟ-ನಿರ್ದೇಶಕ ಮುಖೇಶ್ ಆರ್ ಚೌಕ್ಸೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇಂತಹ ಮಾಲ್ಖನ್ ಸಿಂಗ್ ಇದೀಗ ಹೊಸ ನೋಟು ಬದಲಾವಣೆಗಾಗಿ ಬ್ಯಾಂಕಿನ ಮುಂದೆ ಸರತಿ ಸಾಲಲ್ಲಿ ನಿಂತಿದ್ದು, ಇದೂ ಕೂಡ ಅವರ ಜೀವನಾಧರಿತ ಚಿತ್ರದಲ್ಲಿ ಅಳವಡಿಸಿದ್ದಾರೆಯೇ ಎಂಬ ಕುತೂಹಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.