ನೋಟು ನಿಷೆಧ: ಹಣದ ತುರ್ತು ಅಗತ್ಯ ಇರುವವರಿಗೆ ಕೇರಳದ ಚರ್ಚ್ ನಿಂದ ಸಹಾಯ
ಕೊಚ್ಚಿ: 500, 1೦೦೦ ರೂ ನೋಟುಗಳ ನಿಷೇಧದ ನಿರ್ಧಾರದಿಂದ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಲು ಕೇರಳದ ಚರ್ಚ್ ಒಂದು ಮುಂದಾಗಿದೆ.
ನೋಟು ನಿಷೇಧದಿಂದ ಹಣವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸಂಗ್ರಹ ನಿಧಿಯಿಂದ ಧನ ಸಹಾಯ ಮಾಡುವುದಾಗಿ ಕೇರಳದ ಎರ್ನಾಕುಲಂ ನಲ್ಲಿರುವ ಸೆಂಟ್ ಡೀ ಪೋರ್ರೆಸ್ ಚರ್ಚ್ ಘೋಷಿಸಿದೆ. ನೋಟು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದೇ ಹಣದ ತುರ್ತು ಅಗತ್ಯವಿರುವವರಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸಂಗ್ರಹ ನಿಧಿಯಿಂದ ಚರ್ಚ್ ಸಹಾಯ ಮಾಡಲು ಮುಂದಾಗಿದೆ.
ಈ ಘೋಷಣೆ ಮಾಡಿರುವ ಚರ್ಚ್ ನ ವ್ಯಾಪ್ತಿಯಲ್ಲಿ 200 ಕುಟುಂಬಳಿದ್ದು, ಈ ಪೈಕಿ ಬಹುತೇಕ ಕುಟುಂಬಗಳು ಬ್ಯಾಂಕ್ ಗಳಲ್ಲಿ ಸರಿಯಾದ ಠೇವಣಿ ಹೊಂದಿಲ್ಲದೇ ಇರುವ ಕುಟುಂಬಳಾಗಿವೆ ಅಥವಾ ಎಟಿಎಂ ಬಳಕೆ ವಿಧಾನ ತಿಳಿಯದೇ ಇರುವ ಕುಟುಂಬಗಳಾಗಿವೆ. 500, 1000 ರೂ ನೋಟುಗಳು ನಿಷೇಧವಾದಾಗಿನಿಂದ ಇಂತಹ ಕುಟುಂಬಗಳು ಹಣಕ್ಕಾಗಿ ಪರದಾಡುವ ಸ್ಥಿತಿ ಎದುರಿಸುತ್ತಿವೆ ಎಂದು ಚರ್ಚ್ ನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಹಣದ ತುರ್ತು ಅಗತ್ಯ ಎದುರಿಸುತ್ತಿರುವವರು ಚರ್ಚ್ ನ ಸಂಗ್ರಹ ನಿಧಿಯಿಂದ ಹಣವನ್ನು ತೆಗೆದುಕೊಳ್ಳಬಹುದಾಗಿದೆ. ನಂತರ ತಮಗೆ ಅನುಕೂಲವಾದಾಗ ಅದನ್ನು ವಾಪಸ್ ನೀಡಬಹುದಾಗಿದೆ ಎಂದು ಚರ್ಚ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಚರ್ಚ್ ನ ಸಂಗ್ರಹ ನಿಧಿ ಬಾಕ್ಸ್ ನ್ನು ಆರು ತಿಂಗಳಿಗೆ ಒಮ್ಮೆ ತೆರೆಯಲಾಗುತ್ತದೆ, ನ.20 ರಂದು ಬಾಕ್ಸ್ ನ್ನು ತೆರೆದಾಗ ಅದರಲ್ಲಿ 500, 1000 ರೂ ರ ನೋಟುಗಳು ಕೆಲವೇ ಕೆಲವು ಇದ್ದಿದ್ದು ಕಂಡುಬಂದಿದೆ.