ಮುಂಬೈ: ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿರುವ ಮಿತ್ರ ಪಕ್ಷ ಶಿವಸೇನೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿ ಎಂದು ಗುರುವಾರ ಬಿಜೆಪಿ ಸೂಚಿಸಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ನೋಟ್ ನಿಷೇಧದ ಕ್ರಮವನ್ನು ಟೀಕಿಸಲು ನಾನು ಹಿಂದೇಟು ಹಾಕುವುದಿಲ್ಲ ಎಂದರು. ಅಲ್ಲದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಒಬ್ಬ ಆರ್ಥಿಕ ತಜ್ಞರಾಗಿದ್ದು, ಅವರ ಮಾತು ಮತ್ತು ಅಭಿಪ್ರಾಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು,
125 ಕೋಟಿ ಜನರಿಗಾಗಿ ಒಬ್ಬ ವ್ಯಕ್ತಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಹಾಗೆ ಮಾಡದೇ ಇರುವುದರಿಂದ ಜನಸಾಮಾನ್ಯರು ಕಷ್ಟಕ್ಕೆ ಸಿಲುಕಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ನೋಟ್ ನಿಷೇಧ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿ ಎದುರೇ ನೋಟು ನಿಷೇಧದ ಕ್ರಮದ ಬಗ್ಗೆ ಬಲವಾಗಿ ಆಕ್ಷೇಪವ್ಯಕ್ತಪಡಿಸಿದರು. ನೋಟು ನಿಷೇಧದಿಂದಾಗಿ ಜನಸಾಮಾನ್ಯರು ಮತ್ತು ಸಣ್ಣ ವ್ಯಾಪಾರಿಗಳು ಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೇ ಜಿಡಿಪಿ ಮೇಲೆ ಶೇ.2ರಷ್ಟು ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದ್ದರು.