ದೇಶ

ಜನ್ ಧನ್ ಖಾತೆಗಳಲ್ಲಿ ಜಮಾ ಆದ ಮೊತ್ತ 64 ಸಾವಿರ ಕೋಟಿಗೆ ಏರಿಕೆ!

Srinivas Rao BV
ನವದೆಹಲಿ: ಕೇಂದ್ರ ಸರ್ಕಾರ 500, 1000 ರೂ ನೋಟುಗಳ ನಿಷೇಧ ನಿರ್ಧಾರವನ್ನು ಪ್ರಕಟಿಸಿದ ನಂತರ ಈ ವರೆಗೂ ಜನ್ ಧನ್ ಖಾತೆಗಳಲ್ಲಿ ಜಮಾ ಆಗಿರುವ ಒಟ್ಟು ಹಣ ಕೇವಲ ಎರಡೇ ದಿನಗಳಲ್ಲಿ 64, 252.15 ಕೋಟಿಗೆ ಏರಿಕೆಯಾಗಿದೆ. 
ಈ ಹಿಂದಿನ ಅಂಕಿ-ಅಂಶಗಳು ಪ್ರಕಟವಾದಾಗ ಪಶ್ಚಿಮ ಬಂಗಾಳದ ಜನ್-ಧನ್ ಖಾತೆಗಳಲ್ಲಿ ಅತಿ ಹೆಚ್ಚು ಹಣ ಜಮಾವಣೆ ಆಗಿದ್ದರೆ, ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಚುನಾವಣಾ ಕಣವಾಗಿರುವ ಉತ್ತರ ಪ್ರದೇಶದ ಜನ್-ಧನ್ ಖಾತೆಗಳಲ್ಲಿ ಅತಿ ಹೆಚ್ಚು ಪ್ರಮಾಣದ ಹಣ ಅಂದರೆ ರೂ.10,670.62 ರೂ ಜಮಾ ಆಗಿದೆ.  ನಂತರದ ಸ್ಥಾನಗಳಲ್ಲಿ ಪಶ್ಚಿಮ ಬಂಗಾಳ, ರಾಜಸ್ಥಾನಗಳಿವೆ ಎಂದು ವಿತ್ತ ಖಾತೆಯ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಲೋಕಸಭೆಗೆ ತಿಳಿಸಿದ್ದಾರೆ. 
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು (3.79 ಕೋಟಿ) ಜನ್-ಧನ್ ಖಾತೆಗಳಿದ್ದು, 500, 1000 ರೂ ನೋಟುಗಳನ್ನು ರದ್ದುಗೊಳಿಸಿದ ನಂತರ 10, 670.62 ಕೋಟಿ ರೂಪಾಯಿ ಖಾತೆ ಜಮಾ ಆಗಿದೆ. ಇನ್ನು 2.44 ಕೋಟಿ ಖಾತೆಗಳಿರುವ ಪಶ್ಚಿಮ ಬಂಗಾಳದಲ್ಲಿ 7,826.44 ಕೋಟಿ ಹಣ ಜಮಾ ಆಗಿದ್ದರೆ 1.89 ಕೋಟಿ ಜನ್-ಧನ್ ಖಾತೆಗಳನ್ನು ಹೊಂದಿರುವ ರಾಜಸ್ತಾನದಲ್ಲಿ ಈ ವರೆಗೂ 5,34.57 ಕೋಟಿ ರೂ ಜಮಾ ಆಗಿದೆ. ಉಳಿದಂತೆ ಬಿಹಾರದಲ್ಲಿ ಇರುವ 2.69 ಕೋಟಿ ಖಾತೆಗಳಲ್ಲಿ 4,912.79 ಏರಿಕೆಯಾಗಿದೆ. 
ದೇಶಾದ್ಯಂತ ಇರುವ ಒಟ್ಟು 25.58 ಕೋಟಿ ಖಾತೆಗಳ ಪೈಕಿ 5.98 ಕೋಟಿ ಖಾತೆಗಳು ಶೂನ್ಯ ಠೇವಣಿ(ಜಿರೋ ಬ್ಯಾಲೆನ್ಸ್) ಖಾತೆಗಳಾಗಿದ್ದು, ಜಿರೋ ಬ್ಯಾಲೆನ್ಸ್ ಖಾತೆಗಳಿಗೆ ಒಂದು ರೂ ಅಥವಾ 2 ರೂಪಾಯಿಯನ್ನು ಜಮಾ ಮಾಡುವ ಸೂಚನೆ ನೀಡಿರುವ ಬಗೆಗಿನ ಮಾಹಿತಿಯನ್ನು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ ಗಳು ನಿರಾಕರಿಸಿವೆ ಎಂದು ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ. ಎಲ್ಲಾ ಜನ್-ಧನ್ ಖಾತೆಗಳನ್ನು ಆಧಾರ್ ನಂಬರ್ ನೊಂದಿಗೆ ಸಂಯೋಜಿಸುವಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. 
SCROLL FOR NEXT