ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿಯೇ ಮುಂದುವರೆದಿದ್ದು, ನ್ಯಾಯಾಧೀಶರಿಲ್ಲದೆ ಕೋರ್ಟ್ ರೂಂ ಗಳು ಖಾಲಿ ಹೊಡೆಯುತ್ತಿವೆ ಎಂಬ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಥಾಕೂರ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಹೈಕೋರ್ಟ್ ಗಳಲ್ಲಿ ಸುಮಾರು 500 ಹುದ್ದೆಗಳು ಖಾಲಿ ಇದೆ. ಆ ಎಲ್ಲಾ ಹುದ್ದೆಗೆ ಈಗಾಗಲೇ ಭರ್ತಿಯಾಗಬೇಕಿತ್ತು. ಹಲವು ಕೋರ್ಟ್ ರೂಂ ಗಳು ಖಾಲಿ ಇವೆ. ಆದರೆ ನ್ಯಾಯಾಧೀಶರು ಲಭ್ಯವಿಲ್ಲ ಎಂದು ಠಾಕೂರ್ ಹೇಳಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಕಾನೂನು ಸಚಿವರು, ಸರ್ಕಾರ ಈ ವರ್ಷ 120 ನ್ಯಾಯಾಧೀಶರನ್ನು ನೇಮಕ ಮಾಡಿದೆ. ಇದು 1990ರ ನಂತರ ನಡೆದ ಎರಡನೇ ಅತಿ ಹೆಚ್ಚು ಸಂಖ್ಯೆಯ ನೇಮಕಾತಿಯಾಗಿದೆ. ಇದಕ್ಕು ಮುನ್ನ 2013ರಲ್ಲಿ 121 ನ್ಯಾಯಾಧೀಶರನ್ನು ನೇಮಕ ಮಾಡಲಾಗಿತ್ತು. ಹೀಗಾಗಿ ನಾವು ಸಿಜೆಐ ವಾದವನ್ನು ಗೌರವಯುತವಾಗಿ ಒಪ್ಪುವುದಿಲ್ಲ ಎಂದಿದ್ದಾರೆ.
1990ರಿಂದ ಇದುವರೆಗೆ ಕೇವಲ 80 ನ್ಯಾಯಾಧೀಶರ ನೇಮಕವಾಗಿದೆ. ಇನ್ನೂ ಕೇಳ ಹಂತದ ಕೋರ್ಟ್ ಗಳಲ್ಲಿ 5000 ನ್ಯಾಯಾಧೀಶರ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ಭಾರತ ಸರ್ಕಾರದ ಪಾತ್ರವಿಲ್ಲ. ಈ ಬಗ್ಗೆ ನ್ಯಾಯಾಂಗವೇ ಗಮನಹರಿಸಬೇಕು ಎಂದು ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ ನಂತರ ಕೇಂದ್ರ ಹಾಗೂ ಸರ್ವೋಚ್ಚ ನ್ಯಾಯಾಲಯದ ನಡುವೆ ವಾಕ್ಸಮರ ನಡೆಯುತ್ತಿದ್ದು, ನಿನ್ನೆಯಷ್ಟೇ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದ 43 ಹೆಸರುಗಳನ್ನು ತಿರಸ್ಕರಿಸಿರುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು.