ಟಿ.ಎಸ್.ಥಾಕೂರ್ - ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ನವದೆಹಲಿ: ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಥಾಕೂರ್ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನ್ಯಾಯಾಧೀಶರ ನೇಮಕಾತಿಯಲ್ಲಿ ಮತ್ತು ಅವರಿಗೆ ಸೂಕ್ತ ಸೌಲಭ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ಗಳಲ್ಲಿ ಸುಮಾರು 500 ಹುದ್ದೆಗಳು ಖಾಲಿ ಇದ್ದು, ಕೋರ್ಟ್ ರೂಂ ಗಳು ನ್ಯಾಯಾಧೀಶರಿಲ್ಲದೆ ಖಾಲಿ ಹೊಡೆಯುತ್ತಿವೆ ಎಂದು ಠಾಕೂರ್ ಹೇಳಿದ್ದಾರೆ.
ನ್ಯಾಯಾಧೀಕರಣ ರಚನೆ ಮಾಡುವುದಕ್ಕೆ ನ್ಯಾಯಾಂಗದ ವಿರೋಧವಿಲ್ಲ. ಆದರೆ ನ್ಯಾಯಾಧೀಕರಣಗಳಿಗೆ ನೇಮಕಗೊಂಡ ನ್ಯಾಯಾಧೀಶರಿಗೆ ಸೂಕ್ತ ವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯ ಕಲ್ಪಿಸದಿರುವುದೇ ಸಮಸ್ಯೆಯಾಗಿದೆ ಎಂದಿದ್ದಾರೆ.
ಎಷ್ಟೇ ನ್ಯಾಯಾಧೀಕರಣಗಳಿಗೆ ಸೂಕ್ತ ಸೌಲಭ್ಯ ಇಲ್ಲ ಮತ್ತು ಖಾಲಿ ಬಿಡಲಾಗಿದೆ. ಈಗ ಸುಪ್ರೀಂ ಕೋರ್ಟ್ ನ ಯಾವುದೇ ನಿವೃತ್ತ ನ್ಯಾಯಾಧೀಶರು ನ್ಯಾಯಾಧೀಕರಣದ ಜವಾಬ್ದಾರಿ ವಹಿಸಿಕೊಳ್ಳಲು ಮುಂದೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ನನ್ನ ನಿವೃತ್ತ ಸಹೋದ್ಯೋಗಿಗಳನ್ನು ಅಲ್ಲಿಗೆ ಕಳುಹಿಸಲು ನನಗೆ ನೋವಾಗುತ್ತಿದೆ. ಅವರಿಗೆ ಸೂಕ್ತ ಸೌಲಭ್ಯ ಒದಗಿಸಲು ಸರ್ಕಾರ ಸಿದ್ಧವಿಲ್ಲ ಎಂದು ಟಿ.ಎಸ್.ಥಾಕೂರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ ನಂತರ ಕೇಂದ್ರ ಹಾಗೂ ಸರ್ವೋಚ್ಚ ನ್ಯಾಯಾಲಯದ ನಡುವೆ ವಾಕ್ಸಮರ ನಡೆಯುತ್ತಿದ್ದು, ನಿನ್ನೆಯಷ್ಟೇ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ್ದ 43 ಹೆಸರುಗಳನ್ನು ತಿರಸ್ಕರಿಸಿರುವುದನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.