ಚಂಡೀಗಢ: ಪಂಜಾಬ್'ನ ನಬಾ ಜೈಲಿನಲ್ಲಿ ಭದ್ರತಾ ಲೋಪಗಳು ಕಂಡುಬಂದಿದ್ದು, ಜೈಲಿನಲ್ಲಿದ್ದುಕೊಂಡೇ ಉಗ್ರರು ಮೊಬೈಲ್ ಫೋನುಗಳು ಹಾಗೂ ಫೇಸ್ ಬುಕ್ ಬಳಕೆ ಮಾಡುತ್ತಿದ್ದರು ಎಂಬ ಸತ್ಯಾಂಶ ಇದೀಗ ಬಹಿರಂಗಗೊಂಡಿದೆ.
ಸಮಾಜಘಾತುಕ ಚಟುವಟಿಕೆಗಳನ್ನು ನಡೆಸುತ್ತಿರುವವರನ್ನು ಬಂಧಿಸಿಡಲೆಂದು ಜೈಲುಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜೈಲಿನೊಳಗೆಯೇ ಸಾಕಷ್ಟು ಸಮಾಜಘಾತುಕ ಚಟುವಟಿಕೆಗಳು ನಡೆಸುತ್ತಿವೆ. ಕೆಲ ದಿನಗಳ ಹಿಂದಷ್ಟೇ ಭೋಪಾಲ್ ಕೇಂದ್ರೀಯ ಜೈಲಿನಿಂದ 8 ಮಂದಿ ಸಿಮಿ ಉಗ್ರರು ಪರಾರಿಯಾಗಿದ್ದರು. ನಂತರ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳು ಎನ್'ಕೌಂಟರ್ ನಡೆಸಿ ಎಲ್ಲಾ 8 ಸಿಮಿ ಉಗ್ರರನ್ನು ಹತ್ಯೆ ಮಾಡಿದ್ದರು.
ಈ ಘಟನೆ ಮಾಸುವ ಮುನ್ನವೇ ಪಂಜಾಬ್ ನ ನಬಾ ಜೈಲಿನಲ್ಲೂ ಇಂತಹದ್ದೇ ಘಟನೆ ನಡೆದಿದೆ. ನಬಾ ಜೈಲಿನಿಂದ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರವಾದಿಗಳ ತಂಡದ ನಾಯಕ ಹರ್ಮಿಂದರ್ ಮಿಂಟೂ ಹಾಗೂ ಐವರು ಉಗ್ರರ ಗುಂಪೊಂದು ಪರಾರಿಯಾಗಿದೆ. ಈ ಎರಡೂ ಪ್ರಕರಣಗಳು ಜೈಲುಗಳಲ್ಲಿರುವ ಭದ್ರತಾ ಲೋಪಗಳಿಗೆ ಪ್ರತ್ಯಕ್ಷ ಉದಾಹರಣೆಗಳಾಗಿವೆ.
ಮೂಲಗಳ ಪ್ರಕಾರ, ಇದೀಗ ಪಂಬಾಜ್ ಜೈಲಿನಿಂದ ಪರಾರಿಯಾಗಿರುವ ಉಗ್ರರ ತಂಡ ಜೈಲಿನಲ್ಲಿದ್ದುಕೊಂಡೇ, ಮೊಬೈಲ್ ಫೋನುಗಳು ಹಾಗೂ ಫೇಸ್ ಬುಕ್ ಗಳನ್ನು ಬಳಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಉಗ್ರರು ಜೈಲಿನಿಂದ ಪರಾರಿಯಾಗುವುದಕ್ಕೂ ವಾರದ ಹಿಂದಷ್ಟೇ ಕುಲ್ಪ್ರೀತ್ ಸಿಂಗ್ ಅಲಿಯಾಸ್ ನೀತಾ ಡಿಯೋಬ್ ಎಂಬ ಗ್ಯಾಂಗ್ ಸ್ಟರ್ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದಾರೆಂದು ಆರೋಪಿಸಿ ಐವರು ಆರೋಪಿಗಳನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು. ಬಂಧಿತ ಆರೋಪಿಗಳು ಕುಲ್ಪ್ರೀತ್ ಸಿಂಗ್ ಗೆ ವಾಟ್ಸ್ ಅಪ್ ಮೂಲಕ 20 ಬಾರಿ ಕರೆಯನ್ನು ಮಾಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಐವರನ್ನು ಬಂಧನಕ್ಕೊಳಪಡಿಸಿದ್ದರು. ಈ ಐವರೂ ಜೈಲಿನಿಂದ ಹರ್ಮಿಂದರ್ ಸಿಂಗ್ ಜೊತೆಗೆ ಪರಾರಿಯಾಗಲು ಸಂಚು ರೂಪಿಸಿದ್ದರು. ಪಲ್ವಿಂದರ್ ಸಿಂಗ್ ಈ ಸಂಚಿನ ಪ್ರಮುಖ ಆರೋಪಿಯಾಗಿದ್ದಾನೆಂದು ಮೂಲಗಳು ತಿಳಿಸಿವೆ. ಆದರೆ, ಆ ಬಗೆಗಿನ ಮಾಹಿತಿಯನ್ನು ಪೊಲೀಸರು ಖಚಿತಪಡಿಸಿಲ್ಲ.
ಜೈಲಿನಿಂದ ಉಗ್ರರು ಪರಾರಿಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದರು. ನೇಪಾಳಕ್ಕೆ ಹೋಗುತ್ತಿದ್ದ ಪಲ್ವಿಂದರ್ ಸಿಂಗ್ ನನ್ನು ಉತ್ತರ ಪ್ರದೇಶ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಪರಾರಿಯಾದ ಉಗ್ರರ ಗುಂಪಿನಲ್ಲಿದ್ದ ನವ್ದೀಪ್ ಚಡ್ಡಾ ನನ್ನು ಪೊಲೀಸರು ಬಂಧಿಸಿದ್ದರು.
ಇನ್ನು ಉಗ್ರರು ಜೈಲಿನ ಮೇಲೆ ದಾಳಿ ಮಾಡಿ ಪರಾರಿಯಾಗುವುದಕ್ಕೆ ಜೈಲಿನಲ್ಲಿದ್ದ ಭದ್ರತಾ ಲೋಪಗಳೇ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದ್ದು, ಘಟನೆ ನಡೆದಾಗ ಜೈಲಿನ ಅಧೀಕ್ಷಕ ಹಾಗೂ ಉಪ ಜೈಲು ಅಧೀಕ್ಷಕರು ಸ್ಥಳದಲ್ಲಿಯೇ ಇರಲಿಲ್ಲ. ಅಧಿಕಾರಿಗಳಿಗೆ ಮಾಹಿತಿ ನೀಡದೆಯೇ ಜೈಲಿನ ಅಧೀಕ್ಷಕ ಪರಂಜಿತ್ ಸಿಂಗ್ ಸಂಧು ಹಾಗೂ ಉಪ ಅಧೀಕ್ಷಕ ಕರಣ್ ಜಿತ್ ಸಿಂಗ್ ಸಂಧು ಅವರು ಸಾಮಾಜಿಕ ಸಮಾರಂಭವೊಂದಕ್ಕೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಅಲ್ಲಿನ ಸರ್ಕಾರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪದಡಿಯಲ್ಲಿ ಇಬ್ಬರು ಅಧಿಕಾರಿಗಳನ್ನೂ ಅಮಾನತು ಮಾಡಿದೆ
ಮೂಲಗಳ ಪ್ರಕಾರ ಜೈಲಿನಲ್ಲಿ ಕೈದಿಗಳು ನಿರ್ಭಯವಾಗಿ ಫೋನುಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಜೈಲಿನಲ್ಲಿ ಪರಾರಿಯಾಗುವುದಕ್ಕೂ ಕೇವಲ ಒಂದು ದಿನದ ಹಿಂದಷ್ಟೇ ಉಗ್ರ ಗುರ್ಪ್ರೀತ್ ಸಿಂಗ್ ಜೈಲಿನಲ್ಲಿ ಫೋಟೋವೊಂದನ್ನು ತೆಗೆದುಕೊಂಡು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದಾನೆ. ಅಲ್ಲದೆ, ಸ್ಟೇಟಸ್ ವೊಂದನ್ನು ಅಪ್ ಡೇಟ್ ಮಾಡಿರುವ ಆತ ಹೆಸರಾಗುವಂತಹ ಕೆಲಸವನ್ನು ಮಾಡು ಎಂದು ಹೇಳಿಕೊಂಡಿದ್ದಾರೆ. ಜೈಲಿನಲ್ಲಿದ್ದುಕೊಂಡೇ ಉಗ್ರರು ಈ ಮಟ್ಟಕ್ಕೆ ಚಟುವಟಿಕೆಗಳನ್ನು ನಡೆಸಿರುವುದು ಜೈಲಿನ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.