ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಪಂಜಾಬ್'ನ ನಬಾ ಜೈಲಿನಿಂದ ಪರಾರಿಯಾಗಿ ಮತ್ತೆ ಬಂಧನಕ್ಕೊಳಗಾಗಿದ್ದ ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂ ಜೈಲಿನಲ್ಲಿದ್ದುಕೊಂಡೇ ಪಾಕಿಸ್ತಾನಕ್ಕೆ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದ ಎಂಬ ಸತ್ಯಾಂಶ ಇದೀಗ ಬಹಿರಂಗಗೊಂಡಿದೆ.
ಬಂಧನಕ್ಕೊಳಗಾಗಿದ್ದ ಉಗ್ರರು ಜೈಲಿನಲ್ಲಿದ್ದುಕೊಂಡೇ ಮೊಬೈಲ್ ಫೋನ್ ಗಳು ಹಾಗೂ ಫೇಸ್ ಬುಕ್ ಬಳಕೆ ಮಾಡುತ್ತಿದ್ದರು ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಇದೀಗ ತನಿಖಾಧಿಕಾರಿಗಳು ಉಗ್ರರ ಕಾಲ್ ರೆಕಾರ್ಡ್ಸ್ ಗಳನ್ನು ಪರಿಶೀಲನೆ ನಡೆಸಿದ್ದು, ಖಾಲಿಸ್ತಾನ್ ಮುಖ್ಯಸ್ಥ ಮಿಂಟೂ ಪಾಕಿಸ್ತಾನಕ್ಕೆ ಕರೆ ಮಾಡಿ ಹಲವು ಬಾರಿ ಸಂಭಾಷಣೆ ನಡೆಸಿದ್ದಾನೆಂಬುದು ಇದೀಗ ಖಚಿತವಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಉಗ್ರ ಮಿಂಟೂ ಸ್ಕೈಪ್ ಮೂಲಕ ಪಾಕಿಸ್ತಾನಕ್ಕೆ ಕರೆ ಮಾಡಿದ್ದು, ಸಾಕಷ್ಟು ಬಾರಿ ತನ್ನ ಖಾಲಿಸ್ತಾನ್ ವಿಮೋಚನಾ ದಳದ ಕಾರ್ಯಕರ್ತರೊಂದಿಗೆ ಮಾತುಕತೆ ನಡೆಸಿದ್ದಾನೆ. ಅಲ್ಲದೆ, ಪಾಕಿಸ್ತಾನದಲ್ಲಿರುವ ಇಸಿಸ್ ಉಗ್ರರೊಂದಿಗೂ ಸಂಭಾಷಣೆ ನಡೆಸಿದ್ದಾನೆಂದು ವರದಿಗಳು ತಿಳಿಸಿವೆ.
ಪೊಲೀಸರ ಸಮವಸ್ತ್ರ ಧರಿಸಿ ಬಂದಿದ್ದ 10 ಮಂದಿ ಶಸ್ತ್ರಾಸ್ತ್ರಧಾರಿಗಳು ಪಂಜಾಬ್ ನ ನಬಾ ಜೈಲಿನ ಒಳ ನುಗ್ಗಿದ್ದರು. ಈ ವೇಳೆ ನೂರು ಸುತ್ತು ಗುಂಡು ಹಾರಿಸಿ ಬಂಧನದಲ್ಲಿರಿಸಲಾಗಿದ್ದ ಖಾಲಿಸ್ತಾನ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಸೇರಿದಂತೆ ನಾಲ್ವರು ಉಗ್ರರನ್ನು ಬಂಧನ ಮುಕ್ತ ಗೊಳಿಸಿ ಸಿನಿಮೀಯ ರೀತಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.
ಉಗ್ರರ ಪರಾರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪಂಜಾಬ್ ಸರ್ಕಾರ, ಜೈಲು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಕರ್ತವ್ಯ ಲೋಪದ ಮೇರೆಗೆ ಗೃಹಖಾತೆಯನ್ನೂ ಹೊಂದಿರುವ ಪಂಜಾಬ್ ಉಪ ಮುಖ್ಯಮಂತ್ರಿ ಸುಖ್ ಬೀರ್ ಬಾದಲ್ ಅವರು, ಜೈಲು ಅಧೀಕ್ಷಕ ಹಾಗೂ ಉಪ ಜೈಲು ಅಧೀಕ್ಷಕರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದರು.