ನವದೆಹಲಿ: ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿ, ಉಗ್ರರನ್ನು ಹತ್ಯೆ ಮಾಡಿ ಬಂದಿದ್ದರೂ ಈ ಸತ್ಯವನ್ನು ಒಪ್ಪಿಕೊಳ್ಳದ ಪಾಕಿಸ್ತಾನ ಈಗಲೂ ತೇಪೆ ಹಚ್ಚುವ ಪ್ರಯತ್ನಗಳನ್ನು ಮಾಡುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ನವದೆಹಲಿಯ ಮುಂದಿನ ನಡೆಯನ್ನು ಕಾದು ನೋಡಿ ಎಂದು ಪಾಕಿಸ್ತಾನಕ್ಕೆ ಭಾನುವಾರ ಹೇಳಿದ್ದಾರೆ.
ರಾಷ್ಟ್ರಪಿತ ಗಾಂಧೀಜಿಯವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ನಡೆಸಲಾಗುತ್ತಿರುವ ಸ್ವಚ್ಛ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೇವಲ ದೇಶವಲ್ಲ, ಇಡೀ ವಿಶ್ವಕ್ಕೇ ನಮ್ಮ ಸೇನೆ ತನ್ನ ಧೈರ್ಯ ಹಾಗೂ ಶೌರ್ಯವನ್ನು ಪ್ರದರ್ಶಿಸಿದೆ. ಭಾರತೀಯ ಸೇನೆ ದೇಶ ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಿದೆ ಎಂದು ಹೇಳಿದ್ದಾರೆ.
ಸೀಮಿತ ದಾಳಿ ನಡೆಸಿದ್ದೇವೆಂದು ಭಾರತ ಹೇಳುತ್ತಿದೆ. ಆದರೆ, ಈ ಬಗ್ಗೆ ಭಾರತದ ಬಳಿ ಸಾಕ್ಷ್ಯಾಧಾರಗಳಿಲ್ಲ ಎಂಬ ಪಾಕಿಸ್ತಾನದ ಹೇಳಿಕೆ ಕುರಿತಂತೆ ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ಅವರು, ನವದೆಹಲಿಯ ಮುಂದಿನ ನಡೆಯನ್ನು ಕಾದು ನೋಡಿ ಎಂದು ಪಾಕಿಸ್ತಾನಕ್ಕೆ ತಿಳಿಸಿದ್ದಾರೆ.