ಕೊಚ್ಚಿ: ಕೇರಳ ರಾಜ್ಯವನ್ನು ತನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯು, ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದೆ. ತನ್ನ ಸಂಚಿಗೆ ದೊಡ್ಡ ಯೋಜನೆಯನ್ನೇ ರೂಪಿಸಿರುವ ಇಸಿಸ್ ಉಗ್ರರು ಭಾರತದ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡಿದೆ ಎಂಬ ವಿಚಾರ ಇದೀಗ ಬಹಿರಂಗಗೊಂಡಿದೆ.
ದಕ್ಷಿಣ ಭಾರತದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿರುವ ಇಸಿಸ್ ಉಗ್ರರು, ಹೈಪ್ರೊಫೈಲ್ ನಲ್ಲಿರುವ ಅಧಿಕಾರಿಗಳನ್ನು ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ಇದರಲ್ಲಿ ರಾಜಕಾರಣಿಗಳು ಪ್ರಮುಖವಾಗಿ ಬಿಜೆಪಿ ನಾಯಕರು, ಹೈಕೋರ್ಟ್ ನ್ಯಾಯಾಧೀಶರು ಹಾಗೂ ಕೇಂದ್ರ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದಲ್ಲದೆ, ಧಾರ್ಮಿಕ ಕ್ಷೇತ್ರಗಳ ಮೇಲೂ ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆಂಬ ವಿಚಾರವನ್ನು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಕೇರಳದಲ್ಲಿ 21 ಜನರು ಕಾಣೆಯಾಗಿದ್ದು, ಕಾಣೆಯಾಗಿರುವ ಎಲ್ಲಾ ಯುವಕರೂ ಸಿರಿಯಾಗೆ ತೆರಳಿ ಇಸಿಸ್ ಉಗ್ರ ಸಂಘಟನೆ ಸೇರಿರುವ ಹಲವು ಶಂಕೆಗಳು ವ್ಯಕ್ತವಾಗಿದೆ. ಈ ಬಗ್ಗೆ ಎನ್ಐಎ, ರಾಜ್ಯ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಇಸಿಸ್ ಹಿಟ್ ಲಿಸ್ಟ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಮ್ ರಾಜಶೇಖರನ್, ಬಿಜೆಪಿ ನಾಯಕ ಕೆ. ಸುರೇಂದ್ರನ್, ಇಬ್ಬರು ಹೈಕೋರ್ಟ್ ನ ನ್ಯಾಯಾಧೀಶರು ಹಾಗೂ ಎಸ್ ಪಿ. ಪಿಎನ್. ಉನ್ನಿರಾಜನ್ ಅವರು ಇದ್ದಾರೆಂದು ಹೇಳಲಾಗುತ್ತಿದೆ. ಇದಲ್ಲದೆ, ಕೋಮು ಗಲಭೆಯನ್ನು ಸೃಷ್ಟಿಸಲು ಯತ್ನಿಸುತ್ತಿರುವ ಇಸಿಸ್ ಉಗ್ರರು ಇದಕ್ಕಾಗಿ 12 ಧಾರ್ಮಿಕ ಕ್ಷೇತ್ರಗಳನ್ನು ತನ್ನ ಗುರಿಯಾಗಿಸಿಕೊಂಡಿದೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಬಿಜೆಪಿ ಹೆಚ್ಚು ಜನಪ್ರಿಯಗೊಳ್ಳಲು ಕುಮ್ಮನಮ್ ಮತ್ತು ಸುರೇಂದ್ರ ಅವರು ಪ್ರಮುಖರಾಗಿದ್ದು ಈ ಇಬ್ಬರನ್ನು ಹತ್ಯೆ ಮಾಡಬೇಕೆಂದು ಇಸಿಸ್ ಸಂಚು ರೂಪಿಸಿದೆ. ಇನ್ನು ಹೈಕೋರ್ಟ್ ನ ಇಬ್ಬರು ನ್ಯಾಯಾಧೀಶರು ಕೆಲ ಪ್ರಮುಖ ಪ್ರಕರಣಗಳ ಸಂಬಂಧ ವಿಚಾರಣೆ ನಡೆಸುತ್ತಿದ್ದು, ಇವರನ್ನೂ ಹತ್ಯೆ ಮಾಡಲು ಸಂಚು ರೂಪಿಸಿದೆ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರಾಗಿರುವ ಶಂಕಿತ ಉಗ್ರರು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಹೆಸರಿನಲ್ಲಿ ಗುಂಪುಗಳನ್ನು ಹೊಂದಿದ್ದು, ತಮ್ಮ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಯಾವುದೇ ರೀತಿಯ ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಇತ್ತೀಚೆಗಷ್ಟೇ ಗುಂಪನ್ನು ಬದಲಿಸಿದ್ದರು.
ಬಂಧಿತ ಉಗ್ರರು ಫ್ರಾನ್ಸ್ನ ನೈಸ್ ನಗರದಲ್ಲಿ ನಡೆದ ಉಗ್ರರ ದಾಳಿಯಿಂದ ಪ್ರೇರಣೆಗೊಂಡಿದ್ದು, ಇದೇ ರೀತಿಯ ದಾಳಿಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಕೊಚ್ಚಿಯಲ್ಲೂ ನಡೆಸಲು ಸಂಚು ರೂಪಿಸಿದ್ದರು. ಆದರೆ, ಗುಪ್ತಚರ ಇಲಾಖೆ ಮಾಹಿತಿಯಾಧಾರದ ಮೇಲೆ ಭದ್ರತೆಯನ್ನು ಹೆಚ್ಚಿಸಿದ್ದರಿಂದ ದಾಳಿಯನ್ನು ಕೈಬಿಟ್ಟಿದ್ದರು.
ತಮ್ಮ ದಾಳಿ ಸಂಚು ವಿಫಲವಾದ ಹಿನ್ನೆಲೆಯಲ್ಲಿ ಸ್ಫೋಟಕಗಳು ಸಂಗ್ರಹಿಸುವುದು ಹಾಗೂ ಬಾಂಬ್ ಗಳನ್ನು ತಯಾರು ಮಾಡುವ ತಂತ್ರವನ್ನು ಕಲಿಯಲು ಆರಂಭಿಸಿದ್ದರು. ಈ ವೇಳೆ 6 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಇದೀಗ ರಾಜ್ಯ ಪೊಲೀಸರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ ಎಂದು ಎನ್ಐಎ ಹೇಳಿಕೊಂಡಿದೆ.
ಮತ್ತೆ ನಾಲ್ವರನ್ನು ವಶಕ್ಕೆ ಪಡೆದ ಎನ್ಐಎ
6 ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ರಾಷ್ಟ್ರೀಯ ತನಿಖಾ ತಂಡ ಸೋಮವಾರ ಮತ್ತೆ ನಾಲ್ವರನ್ನು ಬಂಧನಕ್ಕೊಳಪಡಿಸಿದೆ. ಬಂಧಿತರನ್ನು ತಮಿಳುನಾಡು ಮತ್ತು ಕೇರಳ ಮೂಲದವರೆಂದು ಹೇಳಲಾಗುತ್ತಿದ್ದು, ಎನ್ಐಎ ವಿಚಾರಣೆ ನಡೆಸುತ್ತಿದೆ.