ಜಮ್ಮು: ಪಾಕಿಸ್ತಾನ ಶನಿವಾರ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಓರ್ವ ಭಾರತೀಯ ಯೋಧ ಗಾಯಗೊಂಡಿದ್ದಾರೆ.
ಇಂದು ಬೆಳಗ್ಗೆ ಕೃಷ್ಣಗಟಿ-ಮೆಂದಾರ್ ಸೆಕ್ಟರ್ ಬಳಿ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಓರ್ವ ಯೋಧ ಗಾಯಗೊಂಡಿದ್ದಾರೆ ಎಂದು ರಾಜೋರಿ-ಪೂಂಚ್ ಪೊಲೀಸ್ ಮಹಾ ನಿರ್ದೇಶಕ ಜಾನಿ ವಿಲಿಯಮ್ಸ್ ಅವರು ತಿಳಿಸಿದ್ದಾರೆ.
ಈ ಮಧ್ಯೆ, ಗಡಿಯಲ್ಲಿ ಯಾವುದೇ ಕದನ ವಿರಾಮ ಉಲ್ಲಂಘನೆಯಾಗಿಲ್ಲ ಎಂದು ರಕ್ಷಣಾ ವಕ್ತಾರ ಕರ್ನಲ್ ಮನಿಶ್ ಮೆಹ್ತಾ ಅವರು ಹೇಳಿದ್ದಾರೆ. ಆದರೆ ಸೀಮಿತ ದಾಳಿಯ ನಂತರ ಪಾಕಿಸ್ತಾನ ಸುಮಾರು 25ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.