ನವದೆಹಲಿ: ಕಾಶ್ಮೀರದ ನೌಗಾಮ್ ಸೆಕ್ಟರ್ ನಲ್ಲಿ ಸೇನೆ ಹತ್ಯೆ ಮಾಡಿದ್ದ ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ತಯಾರಿಸಲ್ಪಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪಾಕಿಸ್ತಾನ ಎಷ್ಟೇ ಸಾಕ್ಷ್ಯ ಒದಗಿಸಿದರೂ ಆ ರಾಷ್ಟ್ರ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂಬುದನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದಿದೆ.
ಪಾಕಿಸ್ತಾನದ ಉದ್ದೇಶಗಳನ್ನು ಒಂದೊಂದಾಗಿಯೇ ಭಾರತ ವಿಫಲಗೊಳಿಸುತ್ತಿದೆ. ಎಷ್ಟೇ ಸಾಕ್ಷ್ಯಾಧಾರ ನೀಡಿದರೂ ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಹೇಳಿದ್ದಾರೆ.
ಭಾರತದ ವಿರುದ್ಧ ಪಾಕಿಸ್ತಾನ ಪರೋಕ್ಷ ಯುದ್ಧ ನಡೆಸುತ್ತಿದೆ. ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ತಯಾರಿಸಲ್ಪಟ್ಟಿದ್ದು ಎನ್ನುವುದು ಪಾಕಿಸ್ತಾನದ ಯೋಜನೆಗಳನ್ನು ಭಾರತ ವಿಫಲಗೊಳಿಸುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಮೀನಾಕ್ಷಿ ಲೇಖಿ ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಭಯೋತ್ಪಾದಕರನ್ನು ಹತ್ಯೆ ಮಾಡಿರುವುದನ್ನು ಖಚಿತಪಡಿಸಿದ್ದ ಭಾರತೀಯ ಸೇನೆ, ಅವರಿಂದ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳು ಪಾಕಿಸ್ತಾನದಿಂದ ತಯಾರಿಸಲ್ಪಟ್ಟಿದ್ದಾಗಿದ್ದವು ಎಂದು ಹೇಳಿತ್ತು.