ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ (ಸಂಗ್ರಹ ಚಿತ್ರ)
ನವದೆಹಲಿ: ಯುಪಿಎ ಆಡಳಿತ ಸಂದರ್ಭದಲ್ಲಿ ಹೆಲಿಕಾಪ್ಟರ್ ಮತ್ತು ಜಲಾಂತರ್ಗಾಮಿ ದಲ್ಲಾಳಿಯಲ್ಲಿ ತೊಡಗಿತ್ತು ಎಂಬ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿದ್ದರೆ ತೋರಿಸಲಿ ಎಂದು ತಿರುಗೇಟು ನೀಡಿದೆ.
ದಲ್ಲಾಳಿ ನಡೆದಿದ್ದರೆ ನಮ್ಮ ವಿರುದ್ಧ ಕ್ರಮ ಕೈಗೊಳ್ಳಿ.ಯುಪಿಎ ಆಡಳಿತಾವಧಿಯಲ್ಲಿ 1.76 ಕೋಟಿ ರೂಪಾಯಿಗಳ ದಲ್ಲಾಳಿ ನಡೆದಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಅದು ನಿಜವೇ ಆಗಿದ್ದರೆ ನಮ್ಮ ವಿರುದ್ಧ ಎಫ್ ಐಆರ್ ದಾಖಲಿಸಲಿ. ಕೇವಲ ಆರೋಪಗಳಿಂದ ಸಾಕಾಗುವುದಿಲ್ಲ. ಅವರು ಮಾಧ್ಯಮಗಳಿಗೆ ಹಣ ಕೊಟ್ಟಿದ್ದಾರೆ, ಹಾಗಾಗಿ ಅವರನ್ನು ಯಾರೂ ಪ್ರಶ್ನಿಸುವುದಿಲ್ಲ. ಸರ್ಕಾರ ಆಧಾರರಹಿತ ಆರೋಪಗಳನ್ನು ಮಾಡಲು ಸಾಧ್ಯವಿಲ್ಲ. ಸಾಕ್ಷಿಗಳನ್ನು ಒದಗಿಸುವುದು ಅವರ ಕರ್ತವ್ಯ. ಅವರಲ್ಲಿ ಅಷ್ಟು ಸಾಮರ್ಥ್ಯವಿದ್ದರೆ ನಮ್ಮನ್ನು ಕೋರ್ಟ್ ಗೆ ಕರೆದೊಯ್ಯಲಿ. ಇಲ್ಲದಿದ್ದರೆ ಸುಮ್ಮನೆ ಕೂರಲಿ ಎಂದು ಕಾಂಗ್ರೆಸ್ ಮುಖಂಡ ಸಂದೀಪ್ ದೀಕ್ಷಿತ್ ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಯುಪಿಎ ಸರ್ಕಾರದಲ್ಲಿನ ಹಗರಣಗಳನ್ನು ಉಲ್ಲೇಖಿಸಿ, ''2006ರಲ್ಲಿ ಜಲಾಂತರ್ಗಾಮಿ ನೌಕೆ ದಲ್ಲಾಳಿ ನಡೆದಿತ್ತು.ಹೆಲಿಕಾಪ್ಟರ್ ನ ದಲ್ಲಾಳಿ ಕೂಡ ಆಗಿತ್ತು'' ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆರೋಪಿಸಿದ್ದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ರಕ್ತದ ದಲ್ಲಾಳಿ ಎಂದು ಆರೋಪಿಸಿದ್ದಕ್ಕೆ ಪರಿಕ್ಕರ್ ಈ ಪ್ರತಿಕ್ರಿಯೆ ನೀಡಿದ್ದರು.