ಸೂರತ್: ಬಿಜೆಪಿ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಾಗ್ದಾಳಿಯನ್ನು ಮುಂದುವರೆಸಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ ಅಮಿತ್ ಶಾ ಓರ್ವ ರಾಷ್ಟ್ರದ್ರೋಹಿ ಎಂದು ಭಾನುವಾರ ಆರೋಪಿಸಿದ್ದಾರೆ.
ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಿದೆ. ಇದರಂತೆ ನಿನ್ನೆ ಸೂರತ್ ನಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿದ್ದ ಕೇಜ್ರಿವಾಲ್ ಅವರು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ಗಿಂತ ದೇಶಭಕ್ತ ಮತ್ತೊಬ್ಬ ಇಲ್ಲ. ಅಮಿತ್ ಶಾ ಓರ್ವ ರಾಷ್ಟ್ರದ್ರೋಹಿ ಎಂದು ಹೇಳಿದ್ದಾರೆ.
ಹಾರ್ದಿಕ್ ಪಟೇಲ್ ಅವರ ತಪ್ಪಾದರೂ ಏನಿತ್ತು? ಹಾರ್ದಿಕ್ ವಿರುದ್ಧ ದೇಶದ್ರೋಹ ಪ್ರಕರಣವನ್ನು ಯಾವ ಕಾರಣಕ್ಕೆ ದಾಖಲು ಮಾಡಲಾಗಿತ್ತು? ಹಾರ್ದಿಕ್ ಪಟೇಲ್ ಬಗ್ಗೆ ಒಂದನ್ನು ಹೇಳಲು ಇಚ್ಛಿಸುತ್ತೇನೆ ಹಾರ್ದಿಕ್ ನಂತಹ ದೇಶಭಕ್ತ ಮತ್ತೊಬ್ಬ ಇಲ್ಲ ಎಂದಿದ್ದಾರೆ.
ಗುಜರಾತ್ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಪತಿ-ಪತ್ನಿ ಇದ್ದಂತೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಿಳಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ರಬ್ಬರ್ ಸ್ಟಾಂಪ್ ಇದ್ದಂತೆ. ರಾಜ್ಯದಲ್ಲಿ ರೂಪಾನಿ ಅಧಿಕಾರ ನಡೆಸುತ್ತಿಲ್ಲ. ಅಮಿತ್ ಶಾ ಅವರೇ ಗುಜರಾತ್ ನಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅಮಿತ್ ಶಾ ಹೇಳಿದಂತೆ ವಿಜಯ್ ರೂಪಾನಿ ನಡೆಯುತ್ತಿದ್ದಾರೆಂದು ದೂರಿದ್ದಾರೆ.