ರಾಯ್ ಪುರ: ಮಹಿಳೆಯನ್ನು ಅಪಹರಿಸಿ ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಛತ್ತೀಸ್ ಗಡದ ಸ್ಥಳೀಯ ಬಿಜೆಪಿ ಮುಂಖಡ ಪುತ್ರನ ಬಂಧನಕ್ಕಾಗಿ ಛತ್ತೀಸ್ ಗಡ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ಮಹಿಳೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಛತ್ತೀಸ್ ಗಡದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ರಾಜಕಾರಣಿ ಪುತ್ರನನ್ನು ಕೂಡಲೇ ಬಂಧಿಸುವಂತೆ ಸಾಮಾಜಿಕ ಸಂಘಟನೆಯ ಕಾರ್ಯಕರ್ತರು ವ್ಯಾಪಕ ಪ್ರತಿಭಟನೆ ನಡೆಸಿದ್ದಾರೆ. ಮೂಲಗಳ ಪ್ರಕಾರ ಛತ್ತೀಸ್ ಗಡದ ಮಹಾಸಮುಂದ್ ನಲ್ಲಿ ಕಳೆದವಾರ ಈ ಘಟನೆ ನಡೆದಿದ್ದು, ಅತ್ಯಾಚಾರವನ್ನು ವಿಡಿಯೋ ಮಾಡಿಕೊಂಡಿರುವ ಬಿಜೆಪಿ ಮುಖಂಡನ ಪುತ್ರ ವಿಷಯವನ್ನು ಹೊರಗೆ ತಿಳಿಸಿದರೆ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಇದೀಗ ಮಹಿಳೆ ಪೊಲೀಸರಲ್ಲಿ ದೂರು ನೀಡಿದ್ದು, ದೂರಿನ ಸಂಬಂಧ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಬಿಜೆಪಿ ಮುಖಂಡನ ಪುತ್ರ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ವಿವರ:
ರಾಜ್ಯ ರಾಜಧಾನಿ ರಾಯಪುರದಿಂದ ಸುಮಾರು 75 ಕಿ.ಮೀ. ದೂರದಲ್ಲಿರುವ ಮಹಾಸಮುಂದ್ ಜಿಲ್ಲೆಯಲ್ಲಿ ಕಳೆದ ಮಂಗಳವಾರ 36ರ ಹರೆಯದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಕಾರಿನಲ್ಲಿ ಬಂದ ದುಷ್ಕರ್ಮಿಗಳಾದ ದೇವೇಂದ್ರ, ಫರೀದ್ ಅಲಿ ಮತ್ತು ಪ್ರಿನ್ಸ್ ಸಲೂಜ ಎಂಬುವವರು ಮಹಿಳೆಯನ್ನು ಆಕೆಯ ಮನೆಯ ಹಿಂಬದಿಯಿಂದ ಬಲವಂತವಾಗಿ ಹೊತ್ತೂಯ್ದಿದ್ದಾರೆ. ಚಲಿಸುತ್ತಿದ್ದ ಕಾರಿನಲ್ಲೇ ಆಕೆಯ ಮೇಲೆ ಎರಗಿದ ದುಷ್ಕರ್ಮಿಗಳು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ರೇಪ್-ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದರು.
ಆದರೆ ಮರುದಿನವೇ ಮಹಿಳೆ ಪೊಲೀಸರ ಬಳಿ ಹೋಗಿ ದೂರು ನೀಡಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ದೇವೇಂದ್ರ, ಫರೀದ್ ಅಲಿ ಎಂಬವವರನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಪ್ರಿನ್ಸ್ ಸಲೂಜ ನಾಪತ್ತೆಯಾಗಿದ್ದು, ಈತನ ತಂದೆ ಸ್ಥಳೀಯ ಬಿಜೆಪಿ ಮುಖಂಡ ಎಂದು ತಿಳಿದುಬಂದಿದೆ. ತನ್ನ ತಂದೆಯ ಪ್ರಭಾವ ಬಳಸಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗುತ್ತಿದೆ. ಇದೀಗ ಈ ಪ್ರಕರಣ ಛತ್ತೀಸ್ ಗಡದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.