ದೇಶ

ಪತ್ರಕರ್ತೆಗೆ ಕಪಾಳಮೋಕ್ಷ ಮಾಡಿದ ಪೊಲೀಸ್: ತನಿಖೆಗೆ ಆದೇಶಿಸಿ ಪಾಕ್ ಸರ್ಕಾರ

Manjula VN

ಇಸ್ಲಾಮಾಬಾದ್: ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಪತ್ರಕರ್ತೆಯೊಬ್ಬರಿಗೆ ಪೇದೆಯೊಬ್ಬ ಕಪಾಳಮೋಕ್ಷ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನ ಸರ್ಕಾರ ಶನಿವಾರ ತನಿಖೆಗೆ ಆದೇಶಿಸಿದೆ.

ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ಆಂತರಿಕ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಅವರು, ಮಾಧ್ಯಮ ಪ್ರತಿನಿಧಿಯೊಬ್ಬರ ಮೇಲೆ ಹಲ್ಲೆ ಮಾಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಪತ್ರಕರ್ತೆಗೆ ಕಪಾಳಮೋಕ್ಷ ಮಾಡಿದ ಪ್ರಕರಣವನ್ನು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಕೆ-21 ನ್ಯೂಸ್‌ ಚಾನಲ್‌ನಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದ ಸೈಮಾ ಕನ್ವಾಲ್‌ ಎಂಬುವವರು ಕರಾಚಿಯ ನದ್ರಾ ನೋಂದಣಿ ಕಚೇರಿಯೊಂದಕ್ಕೆ ತೆರಳಿ ವರದಿ ಮಾಡುತ್ತಿದ್ದರು.

ನದ್ರಾ ನೋಂದಣಿ ಕಚೇರಿ ಸಿಬ್ಬಂದಿಯಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿ ಮಾಡಲು ಸೈಮಾ ಹೋಗಿದ್ದರು. ಈ ವೇಳೆ ಸೈಮಾ ಅವರು ಪೇದೆಯೊಬ್ಬರನ್ನು ಮಾತನಾಡಿಸಲು ಯತ್ನಿಸಿದ್ದರು. ಇದರಿಂದ ತೀವ್ರವಾಗಿ ಕೆಂಡಾಮಂಡಲವಾದ ಆತ ಮೊದಲು ವರದಿ ಮಾಡುವುದನ್ನು ನಿಲ್ಲಿಸಿ ಎಂದು ಹೇಳಿದ್ದಾನೆ.

ಬಳಿಕ ಕ್ಯಾಮರಾಮನ್‌ ಶೂಟ್ ಮಾಡುವುದನ್ನು ತಡೆಯಲು ಯತ್ನಿಸಿದ್ದಾನೆ. ಮಾಧ್ಯಮ ತನ್ನ ಕೆಲಸ ನಿರ್ವಹಿಸಲು ಅಡ್ಡಿ ಪಡಿಸುತ್ತಿರುವುದನ್ನು ಸೆರೆ ಹಿಡಿಯುವಂತೆ ಪತ್ರಕರ್ತೆ ಕ್ಯಾಮರಾಮೆನ್'ಗೆ ತಿಳಿಸಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ಪೇದೆ ಸಾರ್ವಜನಿಕವಾಗಿ ಆಕೆಯ ಕೆನ್ನೆಗೆ ಬಾರಿಸಿದ್ದಾನೆ, ಪತ್ರಕರ್ತೆಗೆ ಕಪಾಳಮೋಕ್ಷ ಮಾಡಿದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದರಂತೆ ಹಲ್ಲೆ ಮಾಡಿದ ಪೇದೆ ವಿರುದ್ಧ ಗುಲ್‌ಬಾಹರ್‌ ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

SCROLL FOR NEXT