ಮುಂಬೈ: ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು 3ನೇ ಚಾರ್ಜ್ ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ನಲ್ಲಿ ಸಾಕಷ್ಟು ಮಾಹಿತಿಗಳನ್ನು ಸಿಬಿಐ ಉಲ್ಲೇಖಿಸಿದ್ದು, ಶೀನಾ ಹತ್ಯೆಯ ಸಂಚಿನ ಬಗ್ಗೆ ಉದ್ಯಮಿ ಪೀಟರ್ ಮುಖರ್ಜಿಗೆ ಮಾಹಿತಿ ಇತ್ತು. ಕೊಲೆಯ ಬಗ್ಗೆ ಪೀಟರ್ ಅವರಿಗೆ ಇಂದ್ರಾಣಿ ಮುಖರ್ಜಿ ಮಾಹಿತಿ ನೀಡಿದ್ದರು.
ಹತ್ಯೆಯಾದ ಬಳಿಗ ಮೃತದೇಹವನ್ನು ಎಲ್ಲಿ, ಹೇಗೆ ವಿಲೇವಾರಿ ಮಾಡಬೇಕೆಂಬೆಲ್ಲಾ ಮಾಹಿತಿ ತಿಳಿಸಿದಿದ್ದರೂ ಪೀಟರ್ ಅವರು ಏನೂ ತಿಳಿಯದಂತೆ ಸುಮ್ಮನಿದ್ದರು. ಪೀಟರ್ ಜೊತೆಗೆ ಚರ್ಚೆ ನಡೆಸಿಯೇ ಇಂದ್ರಾಣಿ ನಿರ್ಧಾರ ಕೈಗೊಂಡಿದ್ದರು.
ಮಾಹಿತಿ ತಿಳಿದಿದ್ದ ಹಿನ್ನಲೆಯಲ್ಲಿ ಶೀನಾ ಜೊತೆ ಹತ್ತಿರವಾಗದಂತೆ ಪೀಟರ್ ಅವರು ತಮ್ಮ ಮಗನಿಗೆ ಇ-ಮೇಲ್ ಮೂಲಕ ಸಾಕಷ್ಟು ಸಂದೇಶಗಳನ್ನು ರವಾನಿಸಿದ್ದರು. ಈ ಬಗ್ಗೆ ದಾಖಲೆಗಳು ನಮ್ಮ ಬಳಿಯಿದೆ ಎಂದು ಆರೋಪಪಟ್ಟಿಯಲ್ಲಿ ಸಿಬಿಐ ಹೇಳಿಕೊಂಡಿದೆ ಎಂದು ತಿಳಿದುಬಂದಿದೆ.
2012ರಲ್ಲಿ ಶೀನಾ ಬೋರಾ ಅವರನ್ನು ಕಾರೊಂದರಲ್ಲಿ ಕತ್ತು ಹಿಸುಕಿ ಹತ್ಯೆ ಮಾಡಲಾಗಿತ್ತು. ನಂತರ ಮೃತದೇಹವನ್ನು ಅರಣ್ಯ ಪ್ರದೇಶವೊಂದರಲ್ಲಿ ಸುಟ್ಟು ಹಾಕಲಾಗಿತ್ತು. ಸಾಕಷ್ಟು ನಿಗೂಢತೆಯನ್ನು ಹೊಂದಿದ್ದ ಈ ಪ್ರಕರಣವನ್ನು ಇಂದು ಮತ್ತೆ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಲಿದೆ.