ನವದೆಹಲಿ: ಗಡಿಯಲ್ಲಿ ಪಾಕಿಸ್ತಾನ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗಡಿ ಭದ್ರತಾ ಪಡೆ(ಬಿಎಸ್ಎಫ್)ಯ ಯೋಧ ಗುರ್ನಾಮ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವಂತೆ ಅಥವಾ ವಿದೇಶಿ ವೈದ್ಯರನ್ನು ಚಿಕಿತ್ಸೆಗಾಗಿ ಕರೆಸುವಂತೆ ಯೋಧನ ಸಹೋದರಿ ಗುರುಜೀತ್ ಕೌರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಗುರ್ನಾಮ್ ಸಿಂಗ್ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸರ್ಕಾರವು ಅವರನ್ನು ಚಿಕಿತ್ಸೆಗಾಗಿ ಯಾಕೆ ವಿದೇಶಕ್ಕೆ ಕಳಿಸುತ್ತಿಲ್ಲ? ಸಚಿವರು ವಿದೇಶಕ್ಕೆ ಹೋಗಬಹುದಾದರೆ, ಯೋಧರನ್ನೇಕೆ ಕರೆದೊಯ್ಯಬಾರದು ಎಂದು ಪ್ರಶ್ನಿಸಿದ್ದಾರೆ.
ಗುರ್ನಾಮ್ ಸಿಂಗ್ ಚಿಕಿತ್ಸೆಗಾಗಿ ಕನಿಷ್ಠ ಪಕ್ಷ ವಿದೇಶಿ ವೈದ್ಯರ ತಂಡವನ್ನಾದರೂ ಕರೆಸಬಹುದಲ್ಲ, ಅವರ ಪರಿಸ್ಥಿತಿ ಬಗ್ಗೆ ನಾವು ಚಿಂತಿತರಾಗಿದ್ದೇವೆ ಎಂದು ಗುರುಜೀತ್ ಕೌರ್ ಹೇಳಿದ್ದಾರೆ.
ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಹೀರಾನಗರದಲ್ಲಿ ಅಕ್ಟೋಬರ್ 20ರ ನುಸುಕಿನಲ್ಲಿ ನಡೆದ ಪಾಕ್ ಸೈನಿಕರ ಗುಂಡಿನ ದಾಳಿಯಲ್ಲಿ ಗುರ್ನಾಮ್ ಸಿಂಗ್ ಅವರ ತಲೆಗೆ ಗುಂಡೇಟು ಬಿದ್ದಿತ್ತು.