ತಮಿಳುನಾಡು ರಾಜ್ಯಪಾಲ ಸಿಎಚ್ ವಿದ್ಯಾಸಾಗರ ರಾವ್
ಚೆನ್ನೈ: ತಮಿಳುನಾಡು ರಾಜ್ಯಪಾಲ ಸಿಎಚ್ ವಿದ್ಯಾಸಾಗರ ರಾವ್ ಇಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ವಿಚಾರಿಸಿದರು.
ಆಸ್ತತ್ರೆಗೆ ಭೇಟಿ ನೀಡಿದ ರಾಜ್ಯಪಾಲರು ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್ ಗೆ ಹೋಗಿ ನೋಡಿದರು. ಜಯಲಲಿತಾ ಅವರ ಆರೋಗ್ಯ ಸುಧಾರಿಸುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲಿ ಅವರು ಸುಮಾರು 25 ನಿಮಿಷಗಳವರೆಗೆ ಸಮಯ ಕಳೆದರು.
ಈ ಸಂದರ್ಭದಲ್ಲಿ ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಜಯಲಲಿತಾ ಆರೋಗ್ಯದ ಬಗ್ಗೆ ರಾಜ್ಯಪಾಲರಿಗೆ ವಿವರಿಸಿದರು. ಜಯಲಲಿತಾ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದ ವಿಶೇಷ ತಜ್ಞರು ಚಿಕಿತ್ಸೆ ನೀಡುತ್ತಿದ್ದು ಇನ್ನು ಕೆಲ ದಿನಗಳವರೆಗೆ ಉಸಿರಾಟದ ನೆರವು, ಫಿಸಿಯೋ ಥೆರಪಿ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಜಯಲಲಿತಾ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡಕ್ಕೆ ಕೃತಜ್ಞತೆ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ತಮಿಳು ನಾಡು ಸರ್ಕಾರದ ಸಚಿವರು, ಕಾರ್ಯದರ್ಶಿಗಳು ರಾಜ್ಯಪಾಲರನ್ನು ಸ್ವಾಗತಿಸಿದ್ದರು.
ಮುಖ್ಯಮಂತ್ರಿ ಜಯಲಲಿತಾ ಅವರು ಸೆಪ್ಟೆಂಬರ್ 22ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ರಾಜ್ಯಪಾಲರು ಆಸ್ಪತ್ರೆಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics