ಭುವನೇಶ್ವರ: ಒಡಿಶಾದ ಅಂಗುಲ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 55ರಲ್ಲಿ ಮಂಗಳವಾರ ಖಾಸಗಿ ಬಸ್ಸೊಂದು ಸೇತುವೆಯಿಂದ ಕೆಳಗೆ ಉರುಳಿಬಿದ್ದ ಪರಿಣಾಮ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಸ್ ನ ಚಾಲಕ ಬೈಕ್ ಸವಾರನನ್ನು ರಕ್ಷಿಸಲು ಹೋಗಿ ತುಕುಡ ಬಳಿ ಇರುವ ಸೇತುವೆಯಿಂದ 30 ಅಡಿ ಕೆಳಕ್ಕೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಸಂಬಲಾಪುರದಿಂದ ಅಂಗುಲ್ ಗೆ ಮರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಬಸ್ ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು ಎನ್ನಲಾಗಿದೆ.
ಸ್ಥಳೀಯರ ಸಹಾಯದೊಂದಿಗೆ ಪೊಲೀಸರು ಹಲವು ಪ್ರಯಾಣಿಕರನ್ನು ರಕ್ಷಿಸಿದ್ದು, ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಇದುವರೆಗೆ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಜಲನ್ ಅವರು ತಿಳಿಸಿದ್ದಾರೆ.