ದೇಶ

ಪತ್ನಿ ಆತ್ಮಹತ್ಯೆ: ಕಬಡ್ಡಿ ಆಟಗಾರ ರೋಹಿತ್ ನ್ಯಾಯಾಂಗ ಬಂಧನಕ್ಕೆ

Lingaraj Badiger
ನವದೆಹಲಿ: ಪತ್ನಿ ಲಲಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ರಾಷ್ಟ್ರಿಯ ಕಬಡ್ಡಿ ಆಟಗಾರ ರೋಹಿತ್‌ ಕುಮಾರ್‌ ಅವರನ್ನು ಮಂಗಳವಾರ ದೆಹಲಿ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೋಹಿತ್‌ ಅವರನ್ನು ದೆಹಲಿ ಪೊಲೀಸರು ಶುಕ್ರವಾರ ಮುಂಬೈನಲ್ಲಿ ಬಂಧಿಸಿ, ಬಳಿಕ ಹೆಚ್ಚಿನ ವಿಚಾರಣೆಗಾಗಿ ಎರಡು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದರು. ಪೊಲೀಸ್ ಬಂಧನ ಅವಧಿ ಇಂದಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಇಂದು ಮೆಟ್ರೊಪೊಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ನವೆಂಬರ್ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ರೋಹಿತ್‌ ಪತ್ನಿ ಲಲಿತಾ ಅವರು ಇದೇ 17ರಂದು ಪೋಷಕರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಲಲಿತಾ ಅವರು ಬರೆದಿದ್ದ ಮರಣಪತ್ರದಲ್ಲಿ ಅತ್ತೆ ಮತ್ತು ಮಾವ ತಮಗೆ ಕಿರುಕುಳ ನೀಡುತ್ತಿದ್ದರು. ಜತೆಗೆ ತನ್ನ ಜೀವನದಿಂದ ದೂರವಾಗುವಂತೆ ರೋಹಿತ್‌ ಹೇಳಿದ್ದರು ಎಂದು ಬರೆದಿದ್ದರು. ರೋಹಿತ್‌ ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ತಂಡದಲ್ಲಿ ಆಡುತ್ತಾರೆ.
SCROLL FOR NEXT