ದೇಶ

ಕಾಲ್ ಸೆಂಟರ್ ಹಗರಣ: ವಿರಾಟ್ ಕೊಹ್ಲಿಯಿಂದ ಕಾರು ಖರೀದಿಸಿದ್ದ ಕಿರಾತಕ!

Manjula VN

ನವದೆಹಲಿ: ಬಹುಕೋಟಿ ಕಾಲ್ ಸೆಂಟರ್ ಹಗರಣ ಪ್ರಕರಣದಲ್ಲಿ ಇದೀಗ ವಿರಾಟ್ ಕೊಹ್ಲಿ ಅವರ ಹೆಸರು ಕೇಳಿಬಂದಿದ್ದು, ಹಗರಣದ ಕಿಂಗ್ ಪಿನ್ ಆಗಿರುವ ಸಾಗರ್ ಥಕ್ಕರ್ ಅಲಿಯಾಸ್ ಶಾಗ್ಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಂದಲೇ ಕಾರನ್ನು ಖರೀದಿಸಿದ್ದ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗಗೊಂಡಿದೆ.

ನಕಲಿ ಕಾಲ್ ಸೆಂಟರ್ ಮೂಲಕ ರು.500 ಕೋಟಿ ಗೂ ಹೆಚ್ಚು ಹಣವನ್ನು ಸಂಪಾದನೆ ಮಾಡಿದ್ದ ಥಕ್ಕರ್ ತನ್ನ ಪ್ರೇಯಸಿಗೆ ಆಡಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದ. ಹಗರಣ ಬೆಳಕಿಗೆ ಬರುತ್ತಿದ್ದಂತೆ ಅಹ್ಮದಾಬಾದ್ ನಲ್ಲಿ ಈ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ತನಿಖೆ ವೇಳೆ ತಿಳಿದುಬಂದಿರುವ ಕೆಲ ಸ್ಫೋಟಕ ಮಾಹಿತಿಗಳನ್ನು ಅಧಿಕಾರಿಗಳು ಬಹಿರಂಗ ಪಡಿಸಿದ್ದು, ಕಿಂಗ್ ಪಿನ್ ತನ್ನ ಗೆಳತಿಗೆ ಉಡುಗೊರೆಯಾಗಿ ನೀಡಿರುವ ಕಾರು ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದಲೇ ಖರೀದಿ ಮಾಡಿದ್ದಾನೆಂದು ಹೇಳಿದ್ದಾರೆ. ಆದರೆ, ಪ್ರಕರಣಕ್ಕೂ ವಿರಾಟ್ ಕೊಹ್ಲಿಗೂ ಯಾವುದೇ ಸಂಬಂಧವಿಲ್ಲ ಎಂದೂ ಕೂಡ ಸ್ಪಷ್ಟಪಡಿಸಿದ್ದಾರೆ.

ಕಿಂಗ್ ಪಿನ್ ಥಕ್ಕರ್ ಕೊಹ್ಲಿಯವರ ನಿಕಟವರ್ತಿಯಿಂದ ರು.60 ಲಕ್ಷಕ್ಕೆ ಕಾರನ್ನು ಖರೀದಿ ಮಾಡಿದ್ದ. ನಂತರ ಕಾರನ್ನು ತನ್ನ ಗೆಳತಿಗೆ ಉಡುಗೊರೆಯಾಗಿ ನೀಡಿದ್ದನೆಂದು ತಿಳಿದುಬಂದಿದೆ.

ರು. 3 ಕೋಟಿ ಮೌಲ್ಯದ ಆಡಿ ಆರ್8 ಕಾರನ್ನು ನಾವು ವಶಕ್ಕೆ ಪಡೆದುಕೊಂಡಿದ್ದೇವೆ. ತನಿಖೆ ವೇಳೆ ಕಿಂಗ್ ಪಿನ್ ಥಕ್ಕರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಂದಲೇ ಖರೀದಿ ಮಾಡಿರುವುದು ತಿಳಿದುಬಂದಿದೆ. ಆದರೆ, ಥಕ್ಕರ್ ಬಗ್ಗೆ ಯಾವುದೇ ಮಾಹಿತಿಗಳು ಕೊಹ್ಲಿಯವರಿಗೆ ತಿಳಿದಿಲ್ಲ. ಕೊಹ್ಲಿಗೂ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಪಿ ಪ್ರರಾಗ್ ಮನೆರೆ ಅವರು ಹೇಳಿದ್ದಾರೆ.

ಈಗಲೂ ಕಾರು ವಿರಾಟ್ ಕೊಹ್ಲಿಯವರ ಹೆಸರಿನಲ್ಲಿಯೇ ಇದ್ದು, ಕಾರು ಖರೀದಿ ಮಾಡಿದ ಬಳಿಕ ಥಕ್ಕರ್, ದಾಖಲೆಗಳನ್ನು ನೀಡಿ ಮಾಲೀಕತ್ವ ಬದಲಾವಣೆಯನ್ನು ಮಾಡಿಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ಹಾಗೂ ಅಹ್ಮದಾಬಾದ್ ನಕಲಿ ಕಾಲ್ ಸೆಂಟರ್ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ, ಥಾಣೆ ಪೊಲೀಸರು ಅ.4 ರಂದು ರಾತ್ರೋರಾತ್ರಿ ಸುಮಾರು 7 ಕಾಲ್ ಸೆಂಟರ್ ಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ 70 ಜನರನ್ನು ಬಂಧನಕ್ಕೊಳಪಡಿಸಿದ್ದರು. ಹಗರಣದ ಮಾಸ್ಟರ್ ಮೈಂಡ್ ಥಕ್ಕರ್ ಎಂದು ತಿಳಿದುಬಂದಿತ್ತು. ಇದರಂತೆ ಥಕ್ಕರ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸುತ್ತಿದ್ದಂತೆ ಥಕ್ಕರ್ ತಲೆಮರೆಸಿಕೊಂಡಿದ್ದ. ಇದೀಗ ಆತ ದುಬೈನಲ್ಲಿದ್ದಾನೆಂದು ಹೇಳಲಾಗುತ್ತಿದೆ.

SCROLL FOR NEXT