ಮುಂಬೈ: ಬಾಡಿಗೆಗೆ ಮನೆ ತೋರಿಸುವುದಾಗಿ ಕರೆದೊಯ್ದು ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ.
ಮುಂಬೈನ ಅಂಬೋಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಾಡಿಗೆ ಮನೆ ಹುಡುಕುತ್ತಿದ್ದ 28 ವರ್ಷದ ಮಹಿಳೆಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಅಂಬೋಲಿ ಪ್ರದೇಶದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಮಹಿಳೆ ಮತ್ತು ಆಕೆ ಗಂಡನ ಬಳಿ ಬಂದ ಓರ್ವ ದುಷ್ಕರ್ಮಿ ತನ್ನನ್ನು ತಾನು ಮನೆ ಮಧ್ಯವರ್ತಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆಕೆಗೆ ಮನೆ ತೋರಿಸುವುದಾಗಿ ಕರೆದೊಯ್ದಿದ್ದಾನೆ. ಅಂಬೋಲಿ ಪ್ರದೇಶದ ಮನೆ ಬಳಿ ಆಕೆಯ ಗಂಡನನ್ನು ಬೇರೆ ಮನೆ ತೋರಿಸುವುದಾಗಿ ಹೇಳಿದ ಮೂವರು ದುಷ್ಕರ್ಮಿಗಳು ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾರೆ.
ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಅಂಬೋಲಿ ಪೊಲೀಸರು ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಂತೆಯೇ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ 7 ಮಂದಿ ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಈ ಪೈಕಿ ಓರ್ವ ಅಪರಾಧ ಹಿನ್ನಲೆಯುಳ್ಳವನು ಎಂದು ತಿಳಿದುಬಂದಿದೆ.