ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶ ಮತ್ತು ಇತರ 4 ರಾಜ್ಯಗಳಲ್ಲಿ ಚುನಾವಣೆಯನ್ನು ಬಿಜೆಪಿ ಅಭಿವೃದ್ಧಿ ವಿಷಯವನ್ನು ಮುಂದಿಟ್ಟುಕೊಂಡು ಎದುರಿಸಲಿದ್ದು, ಪಕ್ಷದ ಗಮನ ಉದ್ಯೋಗ, ಶಾಂತಿ, ಏಕತೆ ಮತ್ತು ಸಾಮಾಜಿಕ ನ್ಯಾಯದ ಮೇಲಿರುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಅಭಿವೃದ್ಧಿಯ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದಲ್ಲಿ ಮತದಾರರು ಬಿಜೆಪಿಗೆ ಮತ ಹಾಕಲಿದ್ದು, ಪೂರ್ಣ ಬಹುಮತ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ವರ್ಷ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿಗೆ ಸಂಬಂಧಪಟ್ಟ ಹಾಗೆ ನಾವು ಅಭಿವೃದ್ಧಿ ಕೆಲಸಗಳನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ಆಯಾ ರಾಜ್ಯಗಳ ರೈತರು, ಗ್ರಾಮಗಳು, ಉದ್ಯೋಗ ಸೃಷ್ಟಿ ಮೊದಲಾದ ವಿಷಯಗಳನ್ನಿಟ್ಟುಕೊಂಡು ನಾವು ಚುನಾವಣೆಯನ್ನು ಎದುರಿಸಲಿದ್ದು, ಸಾಮಾಜಿಕ ನ್ಯಾಯಕ್ಕಾಗಿ ನಾವು ಬದ್ಧವಾಗಿದ್ದೇವೆ ಎಂದು ಹೇಳಿದರು.
''ನಮ್ಮ ಗುರಿ ದೇಶದಲ್ಲಿ ಶಾಂತಿ, ಏಕತೆ ಮತ್ತು ಸಹೋದರತ್ವ ಕಾಪಾಡುವ ನಿಟ್ಟಿನಲ್ಲಿದೆ. ಈ ನಿಟ್ಟಿನಲ್ಲಿ ನಾವು ಕ್ರಮಗಳನ್ನು ಕೈಗೊಂಡು ಹೆಜ್ಜೆ ಮುಂದಿಡುತ್ತೇವೆ ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ವೋಟು ಬ್ಯಾಂಕ್ ರಾಜಕಾರಣದ ವಾತಾವರಣವಿರಲಿಲ್ಲ. ಬದಲಾಗಿ ಅಭಿವೃದ್ಧಿ ರಾಜಕಾರಣದ ವಾತಾವರಣವಿತ್ತು.ಅಭಿವೃದ್ಧಿ ರಾಜಕಾರಣದತ್ತ ಸಮಾಜದ ಇಡೀ ವರ್ಗ ಬದಲಾಗಿದೆ ಎಂದು ಪ್ರಧಾನಿ ಹೇಳಿದರು.
''30 ವರ್ಷಗಳ ನಂತರ ನಮ್ಮ ಸಮಾಜದ ವರ್ಗವೊಂದು ಒಟ್ಟಾಗಿ ಬಹುಮತ ಸರ್ಕಾರವನ್ನು ಅಧಿಕಾರಕ್ಕೆ ತಂದಿದೆ. ಸಮಾಜದ ಇಡೀ ವರ್ಗ ಬದಲಾವಣೆ ತಂದಿದೆ. ಉತ್ತರ ಪ್ರದೇಶದ ಜನತೆ ಕೂಡ ತಮ್ಮ ರಾಜ್ಯದ ಬೆಳವಣಿಗೆ, ಅಭಿವೃದ್ಧಿಗಾಗಿ ಬಹುಮತ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಾರೆ ಎಂಬ ನಂಬಿಕೆಯಿದೆ ಎಂದು ಹೇಳಿದ್ದಾರೆ.