ಜಮ್ಮು-ಕಾಶ್ಮೀರದ ಸಬ್ ಇನ್ಸ್ ಪೆಕ್ಟರ್ ಪಾಕ್ ಆಕ್ರಮಿತ ಕಾಶ್ಮೀರ ಭಾಗದ ಯುವತಿಯೊಂದಿಗೆ ಮದುವೆ ಸಂದರ್ಭದಲ್ಲಿ
ಶ್ರೀನಗರ: ಇದೊಂದು ಹೃದಯಸ್ಪರ್ಶಿ ಪ್ರೇಮಕಥೆಯಾಗಿದ್ದು, ಮಾನವನ ಭಾವನೆಗಳು ರಾಜಕೀಯ ಸಂಘರ್ಷ ಮತ್ತು ಗಡಿಯನ್ನು ಮೀರಿ ನಿಂತಿದೆ.ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬ ತನ್ನ ದೂರದ ಸಂಬಂಧಿಕ ಭಾರತ-ಪಾಕಿಸ್ತಾನ ವಿಭಜನೆಗೊಂಡ ಪಾಕ್ ಆಕ್ರಮಿತ ಕಾಶ್ಮೀರದ ಯುವತಿಯೊಬ್ಬರನ್ನು ಮದುವೆಯಾಗಿದ್ದಾರೆ.
ಒವೈಸ್ ಗಿಲಾನಿ ಎಂಬ ಪೊಲೀಸ್ ಅಧಿಕಾರಿ ಸೈದಾ ಫೈಜಾ ಗಿಲಾನಿ ಎಂಬ ಯುವತಿಯನ್ನು ಈ ವಾರದ ಆರಂಭದಲ್ಲಿ ಮದುವೆಯಾಗಿದ್ದಾರೆ. ಆಗಸ್ಟ್ 29ರಂದು ಕಾಶ್ಮೀರದಲ್ಲಿ ಕರ್ಫ್ಯೂವನ್ನು ಸಡಿಲಿಸಿದ ನಂತರ ಯುವತಿ ಮತ್ತು ಅವಳ ಮನೆಯವರು ಗಡಿ ದಾಟಿ ಬಂದು ಮದುವೆಯಾಗಿದ್ದಾರೆ. ಮೊನ್ನೆ ಆಗಸ್ಟ್ 30ರಂದು ಶ್ರೀನಗರದಲ್ಲಿ ಮದುವೆ ಏರ್ಪಟ್ಟಿತ್ತು.
ಇವರಿಬ್ಬರ ನಿಖಾ 2014ರಲ್ಲಿಯೇ ನಡೆದಿತ್ತು. ಇವರಿಬ್ಬರೂ ದೂರದಲ್ಲಿ ಸಂಬಂಧಿಕರು. ಭಾರತ-ಪಾಕ್ ಇಬ್ಭಾಗವಾದ ನಂತರ ಯುವತಿಯ ಮನೆಯವರು ಪಾಕ್ ಆಕ್ರಮಿತ ಕಾಶ್ಮೀರದ ಭಾಗಕ್ಕ ಸೇರಿದ್ದರು. ಆಗ ದೂರವಾದ ನಾವು ಈಗ ಮದುವೆಯಾಗುವುದರ ಮೂಲಕ ಮತ್ತೆ ಹತ್ತಿರವಾಗಿದ್ದೇವೆ ಎನ್ನುತ್ತಾರೆ ವರನ ತಂದೆ. ಈ ಹಿಂದೆ ಮದುವೆ ದಿನಾಂಕವನ್ನು ಮೂರು ಬಾರಿ ರದ್ದು ಮಾಡಲಾಗಿತ್ತು. ಇನ್ನು ಶಾಂತಿ ನೆಲೆಸಲಿ ಎಂದು ಕಾದು ಕುಳಿತರೆ ಪ್ರಯೋಜನವಿಲ್ಲವೆಂದು ಕಾಶ್ಮೀರದಲ್ಲಿ ಗಲಭೆಯ ನಡುವೆಯೂ ಮದುವೆ ಮಾಡಿಕೊಳ್ಳಲು ನಿಶ್ಚಯಿಸಿದೆವು ಎನ್ನುತ್ತಾರೆ ಅವರು.