ನವದೆಹಲಿ: ಭಾರತ ಶೀಘ್ರದಲ್ಲೇ ಪೆಟ್ರೋಲ್ ಆಮದು ರಹಿತ ದೇಶವಾಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬುಧವಾರ ಹೇಳಿದ್ದಾರೆ.
ನೀತಿ ಆಯೋಗ ಏರ್ಪಡಿಸಿದ್ದ ಮಿಥೆನಾಲ್ ಆರ್ಥಿಕತೆ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ನಿತಿನ್ ಗಡ್ಕರಿ ಅವರು, ಭಾರತದಲ್ಲಿ ಪೆಟ್ರೋಲ್ ಗೆ ಪರ್ಯಾಯವಾದ ಇಂಧನ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಆ ಮೂಲಕ ಭಾರತ ಶೀಘ್ರದಲ್ಲಿಯೇ ಶೂನ್ಯ ಪೆಟ್ರೋಲ್ ಆಮದು ದೇಶವಾಗಿ ಹೊರಹೊಮ್ಮಲಿದೆ ಎಂದು ಅವರು ಹೇಳಿದರು.
"ಭಾರತ ದೇಶವನ್ನು ಪೆಟ್ರೋಲ್ ಆಮದು ರಹಿತ ದೇಶವನ್ನಾಗಿ ರೂಪಿಸಲು ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಪೆಟ್ರೋಲ್ ಗೆ ಪರ್ಯಾಯ ಇಂಧನಗಳಾಗಿರುವ ಎಥೆನಾಲ್, ಮಿಥೆನಾಲ್ ಹಾಗೂ ಸಿಎನ್ ಜಿ ಬಳಕೆ ಕುರಿತು ಜಾಗೃತಿ ನಡೆಸಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು, ಇದು ಗ್ರಾಮೀಣ ಹಾಗೂ ಕೃಷಿಕ ಕ್ಷೇತ್ರದಲ್ಲಿ ವ್ಯಾಪಕ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ" ಎಂದು ಗಡ್ಕರಿ ಹೇಳಿದ್ದಾರೆ.
"ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ಅಗ್ಗದ ದರದಲ್ಲಿ ಮಾರಾಟವಾಗುತ್ತಿದ್ದರೂ ಭಾರತ ವಾರ್ಷಿತ ಸುಮಾರು 7.5 ಲಕ್ಷ ಕೋಟಿ ಹಣವನ್ನು ಪೆಟ್ರೋಲಿಯಂಗಾಗಿ ಖರ್ಚು ಮಾಡುತ್ತಿತ್ತು. ಆದರೆ ಈ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಭಾರತ ಪ್ರಸ್ತುತ ಪೆಟ್ರೋಲಿಯಂಗಾಗಿ ಕೇವಲ 4.5 ಲಕ್ಷ ಕೋಟಿ ಹಣವನ್ನು ವ್ಯಯಿಸುತ್ತಿದೆ. ಈ ಪ್ರಮಾಣವನ್ನು ಶೂನ್ಯಕ್ಕೆ ತರುವುದು ಸರ್ಕಾರದ ಪ್ರಯತ್ನವಾಗಿದ್ದು, ಇದೇ ಕಾರಣಕ್ಕೆ ಪರ್ಯಾಯ ಇಂಧನಗಳ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಗಡ್ಕರಿ ಹೇಳಿದರು.
ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತೀಯ ಆರ್ಥಿಕತೆ ಕೂಡ ಒಂದಾಗಿದ್ದು, ಭಾರತಕ್ಕೆ ಇದೊಂದು ಸುವರ್ಣಾವಕಾಶವಾಗಿದೆ. ನಮ್ಮ ಕೃಷಿಕವಲಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಬಿದಿರನ್ನು ಸಂಸ್ಕರಿಸುವ ಮೂಲಕ ಪರ್ಯಾಯ ಇಂಧನ ಮತ್ತು ಕಲ್ಲಿದ್ದಲುಗಳನ್ನು ಬಳಕೆ ಮಾಡಿ ವಿದ್ಯುತ್ ಅನ್ನು ಇಂಧನವಾಗಿ ಬಳಕೆ ಮಾಡಬಹುದಾಗಿದೆ ಎಂದು ಗಡ್ಕರಿ ಹೇಳಿದರು.
ಗ್ರಾಮೀಣ ವಲಯಕ್ಕೆ ಸಮಗ್ರ ಬದಲಾವಣೆ ತರುವ ಮೂಲಕ ಕೃಷಿಕ ವಲಯಕ್ಕೆ ಆದ್ಯತೆ ನೀಡಿ, ಸಮರ್ಥ ಆರ್ಥಿಕ ಮೂಲವಾಗಿ ಪರಿವರ್ತಿಸಬೇಕಿದೆ. ಆ ಮೂಲಕ ಭಾರತದ ಆರ್ಥಿಕತೆ ಬೆಳವಣಿಗೆಗೆ ವೇಗ ನೀಡಬೇಕಿದೆ ಎಂದು ಗಡ್ಕರಿ ಹೇಳಿದರು.