ರಾಹುಲ್ ಗಾಂಧಿ ಒಳ್ಳೆ ವ್ಯಕ್ತಿ, ಅವರ ಸ್ನೇಹ ಮಾಡಲು ಸಿದ್ಧ ಎಂದ ಅಖಿಲೇಶ್ ಯಾದವ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಇತ್ತ 2,500 ಕಿ.ಮೀ ಯಾತ್ರೆ ನಡೆಸುತ್ತಿದ್ದರೆ, ಅತ್ತ ಉತ್ತರ ಪ್ರದೇಶ ಯುವ...
ಲಖನೌ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದಲ್ಲಿ ಇತ್ತ 2,500 ಕಿ.ಮೀ ಯಾತ್ರೆ ನಡೆಸುತ್ತಿದ್ದರೆ, ಅತ್ತ ಉತ್ತರ ಪ್ರದೇಶ ಯುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಾಂಗ್ರೆಸ್ ಯುವರಾಜ ಒಬ್ಬ ಉತ್ತಮ ಮನುಷ್ಯ, ಅವರೊಂದಿಗೆ ಸ್ನೇಹ ಬೆಳೆಸಲು ಸಿದ್ಧ ಎಂದು ಗುರುವಾರ ಹೇಳಿದ್ದಾರೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಳ್ಳುತ್ತದೆಯೇ? ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ದೇಶದ ಅತಿ ಕಿರಿಯ ಮುಖ್ಯಮಂತ್ರಿ ಅಖಿಲೇಶ್ ಯಾದವ್, ರಾಹುಲ್ ತುಂಬಾ ಒಳ್ಳೆಯ ಯುವಕ, ಆತ ಉತ್ತರ ಪ್ರದೇಶಕ್ಕೆ ಭೇಟಿ ಕೊಡಬೇಕು, ಮತ್ತು ಹೆಚ್ಚು ಸಮಯ ಇಲ್ಲಿ ಕಾಲಕಳೆಯಬೇಕು ಎಂದು ಹೇಳಿದರು.
ರಾಹುಲ್ ಜೀ ತುಂಬಾ ಒಳ್ಳೆ ಮನುಷ್ಯ, ತುಂಬಾ ಒಳ್ಳೆ ಹುಡುಗ. ಆತ ಉತ್ತರಪ್ರದೇಶದಲ್ಲಿ ಹೆಚ್ಚು, ಹೆಚ್ಚು ಕಾಲ ಕಳೆದರೆ ನಮಗೂ ಆತನ ಜೊತೆ ಗೆಳೆತನ ಬೆಳೆಯುತ್ತೆ. ಇಬ್ಬರು ಒಳ್ಳೇ ಮನುಷ್ಯರು ಜೊತೆಯಾದರೆ ಅದರಲ್ಲಿ ತಪ್ಪೇನಿದೆ ಎಂದು ಅಖಿಲೇಶ್ ಯಾದವ್ ಪ್ರಶ್ನಿಸಿದರು.
ಮುಂಬರುವ ಉತ್ತರಪ್ರದೇಶ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯುಪಿಯ ಬಸ್ತಿ ಪ್ರದೇಶದಲ್ಲಿ ರೋಡ್ ಶೋ ನಡೆಸಿದ ನಂತರ ಸಮಾಜವಾದಿ ಪಕ್ಷದ ಮುಖಂಡ, ಸಿಎಂ ಅಖಿಲೇಶ್ ಈ ಹೇಳಿಕೆ ನೀಡಿದ್ದಾರೆ.