ದೇಶ

ರಾಜೀವ್ ರೋಷನ್ ಹತ್ಯೆ: 11 ವರ್ಷಗಳ ಬಳಿಕ ಮಾಜಿ ಆರ್ ಜೆಡಿ ಸಂಸದ ಶಹಾಬುದ್ದೀನ್ ಬಿಡುಗಡೆ

Srinivasamurthy VN

ಪಾಟ್ನಾ: ಹನ್ನೊಂದು ವರ್ಷಗಳ ಹಿಂದೆ ಇಬ್ಬರು ಸಹೋದರರ ಮೇಲೆ ಆ್ಯಸಿಡ್ ದಾಳಿ ನಡೆಸಿ, ಹತ್ಯೆ ಮಾಡಿ ಬಳಿಕ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಬಿಜೆಪಿ ಮುಖಂಡ ರಾಜೀವ್ ರೋಷನ್ ಎಂಬುವವರನ್ನು ಹತ್ಯೆಗೈದ ಆರೋಪದ ಮೇಲೆ ಕಳೆದ 11 ವರ್ಷಗಳಿಂದ ಜೈಲಿನಲ್ಲಿದ್ದ ಮಾಜಿ ಆರ್ ಜೆಡಿ ಸಂಸದ ಹಾಗೂ ಲಾಲೂ ಪ್ರಸಾದ್ ಯಾದವ್ ಅವರ ಆಪ್ತ ಶಹಾಬುದ್ದೀನ್ ಜಾಮೀನಿನ  ಮೇಲೆ ಬಿಡುಗಡೆಯಾಗಿದ್ದಾರೆ.

ಬಿಹಾರದ ಭಾಗಲ್ಪುರದಲ್ಲಿರುವ ಕೇಂದ್ರ ಕಾರಾಗೃಹದಿಂದ ಇಂದು ಬೆಳಗ್ಗೆ ಶಹಾಬುದ್ದೀನ್ ಬಿಡುಗಡೆಯಾಗಿದ್ದು, ರಾಜೀವ್ ರೋಷನ್ ಹತ್ಯೆ ಪ್ರಕರಣ ಸಂಬಂಧ ಕಳೆದ 11 ವರ್ಷಗಳಿಂದ  ಜೈಲಿನಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದ ಅವರಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು. ಅದರಂತೆ ಇಂದು ಅವರು ಜೈಲಿನಿಂದ ಬಿಡುಗಡೆಯಾಗಿದ್ದು, ಅವರ ಆಪ್ತರಲ್ಲಿ ಸಂಭ್ರಮದ  ವಾತಾವರಣ ನೆಲೆಸಿದೆ.

ಜೈಲಿನ ಹೊರಗೆ ಅವರ ಬರುವಿಕೆಗಾಗಿ ಕಾಯುತ್ತಿದ್ದ ಅವರ ಆಪ್ತರು ಜೈಲಿನಿಂದ ಹೊರಬರುತ್ತಿದ್ದಂತೆಯೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಲ್ಲದೆ ಅವರ ಹಾರ-ತುರಾಯಿಗಳನ್ನು  ಹಾಕಿ ಸ್ವಾಗತ ಕೋರಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಶಹಾಬುದ್ದೀನ್ ತಮ್ಮದಲ್ಲದ ತಪ್ಪಿಗೆ ನಾನು ಜೈಲು ಶಿಕ್ಷೆ ಅನುಭವಿಸುವಂತಾಗಿತ್ತು. ಆದರೆ  ನ್ಯಾಯಾಲಯದ ವಿಚಾರಣೆ ಮೇಲೆ ತಮಗೆ ನಂಬಿಕೆ ಇದ್ದು ಖಂಡಿತಾ ನ್ಯಾಯ ದೊರೆಯಲಿದೆ ಎಂದು ಹೇಳಿದ್ದಾರೆ.

ಹನ್ನೊಂದು ವರ್ಷಗಳ ಹಿಂದೆ ಇಬ್ಬರು ಸಹೋದರರ ಮೇಲೆ ಆ್ಯಸಿಡ್ ದಾಳಿ ನಡೆಸಿ, ಹತ್ಯೆ ಮಾಡಿ ಬಳಿಕ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಬಿಜೆಪಿ ಮುಖಂಡ ರಾಜೀವ್ ರೋಷನ್  ಎಂಬುವವರನ್ನು ಹತ್ಯೆಗೈದ ಆರೋಪದ ಸಂಬಂಧ ಪ್ರಮುಖ ಆರೋಪಿಯಾಗಿದ್ದ ಬಿಹಾರದ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಮತ್ತು ಇತರೆ ಮೂವರು ಆರೋಪಿಗಳಿಗೆ ಬಿಹಾರದ  ನ್ಯಾಯಾಲಯ 2015ರಲ್ಲಿ  ಜೀವಾವಧಿ ಶಿಕ್ಷೆ ವಿಧಿಸಿತ್ತು.

SCROLL FOR NEXT