ನವದೆಹಲಿ: ಪಾಕಿಸ್ತಾನದ ದೌರ್ಜನ್ಯಗಳಿಂದ ಬಿಡುಗಡೆಗಾಗಿ ಬಯಸುತ್ತಿರುವ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರರು ಈಗ ವಿಶ್ವಸಂಸ್ಥೆ ಕದ ತಟ್ಟಲು ನಿರ್ಧರಿಸಿದ್ದಾರೆ.
ಸೆ.13 ರಂದು ವಿಶ್ವಸಂಸ್ಥೆಯ ಮಹಾಸಭೆಯ ಎದುರು ಪ್ರತಿಭಟನೆ ನಡೆಸುವುದಾಗಿ ಬಲೂಚಿಸ್ತಾನ ಸ್ವಾತಂತ್ರ್ಯ ಹೋರಾಟಗಾರ ದಿಲ್ಶಾದ್ ಬಲೂಚ್ ಹೇಳಿದ್ದಾರೆ. ಇದೇ ವೇಳೆ ಬಲೂಚಿಸ್ತಾನ ವಿಮೋಚನೆಗಾಗಿ ಬೆಂಬಲಿಸಿರುವ ಭಾರತಕ್ಕೆ ದಿಲ್ಶಾದ್ ಬಲೂಚ್ ಧನ್ಯವಾದ ತಿಳಿಸಿದ್ದು, ವಿಶ್ವದಾದ್ಯಂತ ಇರುವ ಭಾರತೀಯರು ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದು, ನಾವು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ದಿಲ್ಶಾದ್ ಬಲೂಚ್, ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದು ತಮ್ಮ ಹೋರಾಟಕ್ಕೆ ಭಾರತದಿಂದ ಬೆಂಬಲ ಪಡೆಯಲು ಇತ್ತೀಚೆಗಷ್ಟೇ ನವದೆಹಲಿಗೆ ಭೇಟಿ ನೀಡಿದ್ದರು. ಬಲೂಚಿಸ್ತಾನದ ಹೋರಾಟಕ್ಕೆ ಬೆಂಬಲ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಬಲೂಚ್ ರಾಷ್ಟ್ರೀಯವಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಶ್ವದ ನಾಯಕರೂ ಬಲೂಚಿಸ್ತಾನದ ಸ್ವಾತಂತ್ರ್ಯ ಹೋರಾಟವನ್ನು ಹಾಗು ಪಾಕಿಸ್ತಾನದ ದೌರ್ಜನ್ಯಗಳನ್ನು ಗುರುತಿಸಬೇಕು ಎಂದು ಮನವಿ ಮಾಡಿದ್ದಾರೆ. ಇದರ ಭಾಗವಾಗಿ ಈಗ ವಿಶ್ವಸಂಸ್ಥೆ ಕಚೇರಿಯ ಎದುರು ಸೆ.13 ಕ್ಕೆ ಪ್ರತಿಭಟನೆ ಮಾಡುವುದಾಗಿ ದಿಲ್ಶಾದ್ ಬಲೂಚ್ ತಿಳಿಸಿದ್ದಾರೆ.