ದೇಶ

ಏಮ್ಸ್ ನ ಆಸ್ತಿಗೆ ಹಾನಿ: ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ಎಫ್ಐಆರ್

Srinivas Rao BV

ನವದೆಹಲಿ: ದೆಹಲಿಯ ಆಮ್ ಆದ್ಮಿ ಪಕ್ಷದ ಶಾಸಕ ಸೋಮನಾಥ್ ಭಾರ್ತಿ ವಿರುದ್ಧ ಏಮ್ಸ್ ಆಸ್ಪತ್ರೆಯ ಆಸ್ತಿಗೆ ಹಾನಿ ಉಂಟು ಮಾಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಏಮ್ಸ್ ನ ಭದ್ರತಾ ವಿಭಾಗದ ಮುಖ್ಯಸ್ಥ ಆರ್ ಎಸ್ ರಾವತ್ ಅವರು ನೀಡಿದ ದೂರನ್ನು ಆಧರಿಸಿ ದೆಹಲಿ ಪೊಲೀಸರು ಸೋಮನಾಥ್ ಭಾರ್ತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸೆ.9 ರಂದು ರಾತ್ರಿ 9:45 ವೇಳೆಗೆ ಏಮ್ಸ್ ಗೆ ಸೇರಿದ ಗೋಡೆಯನ್ನು ನಾಶ ಮಾಡಲು ಉದ್ರಿಕ್ತರ ಗುಂಪಿಗೆ ಪ್ರಚೋದನೆ ನೀಡಿದ್ದರು ಎಂದು ಭದ್ರತಾ ಮುಖ್ಯಸ್ಥ ಆರ್ ಎಸ್ ರಾವತ್ ದೂರಿನಲ್ಲಿ ತಿಳಿಸಿದ್ದಾರೆ.

ಗೌತಮ್ ನಗರ್ ನಲ್ಲಾಹ್ ರಸ್ತೆ ಭಾಗದಲ್ಲಿರುವ ಗೋಡೆಯನ್ನು ಒಡೆಯಲು ಸೋಮನಾಥ್ ಭಾರ್ತಿ ಅವರು ಅನಧಿಕೃತ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದರು, ಅಷ್ಟೇ ಅಲ್ಲದೆ ಅಲ್ಲಿದ್ದ ಏಮ್ಸ್ ನ ಭದ್ರತಾ ಸಿಬ್ಬಂದಿಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ರಾವತ್ ದೂರಿನಲ್ಲಿ ತಿಳಿಸಿದ್ದಾರೆ.

ಸೋಮನಾಥ್ ಭಾರ್ತಿ ಹಾಗೂ ಅವರ ಸಿಬ್ಬಂದಿಗಳನ್ನು ತಡೆಗಟ್ಟಲು ಯತ್ನಿಸಿದ ಆರು ಭದ್ರತಾ ಸಿಬ್ಬಂದಿಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೋಮನಾಥ್ ಭಾರ್ತಿ ಹಾಗೂ ಅವರ ಬೆಂಬಲಿಗರ ವಿರುದ್ಧ ಸೆಕ್ಷನ್ 147(ದಾಂಧಲೆ), 148( ಮಾರಕಾಸ್ತ್ರಗಳಿಂದ ದಾಳಿ) 186( ಸಾರ್ವಜನಿಕ ಸೇವೆ ಸಿಬ್ಬಂಧಿಗಳ ಕೆಲಸಕ್ಕೆ ಅಡ್ಡಿ) 353( ಸರ್ಕಾರಿ ಸಿಬ್ಬಂದಿಗಳ ಮೇಲೆ ಹಲ್ಲೆ) ನಡೆಸಿದ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ.

SCROLL FOR NEXT